ಪಕ್ಷಾಂತರ ನಿಷೇಧ ಕಾಗದದ ಹುಲಿ

Advertisement

ಪಕ್ಷಾಂತರಿಗಳು ಯಾರೇ ಇರಲಿ ಅವರಿಗೆ ನಮ್ಮ ಮತ ಇಲ್ಲ ಎಂದು ಜನತೆ ತೀರ್ಮಾನಿಸಿದರೆ ಪಕ್ಷಾಂತರ ತಂತಾನೇ ನಿಲ್ಲುತ್ತದೆ. ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಮೇಲೆ ಪಕ್ಷಾಂತರದ ಪ್ರಶ್ನೆ ಬರೋಲ್ಲ.

ಈಗ ದೇಶದಲ್ಲಿ ಜಾರಿಯಲ್ಲಿರುವ ಪಕ್ಷಾಂತರ ನಿಷೇಧ ಕಾಯ್ದೆ ಕಾಗದದ ಹುಲಿ. ಕಾಯ್ದೆ ಉಲ್ಲಂಘಿಸಿದವರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಹೀಗಾಗಿ ಕಾಯ್ದೆ ರಚಿಸಿದವರಿಗೇ ಅದರ ಭಯ ಇಲ್ಲ. ಕಾಯ್ದೆ ರಚಿಸಿದವರೇ ರಂಗೋಲಿ ಕೆಳಗೆ ನುಸುಳುವುದು ಹೇಗೆ ಎಂಬುದನ್ನು ಕಂಡು ಕೊಂಡಿದ್ದರು. ಹೀಗಾಗಿ ಇದರಿಂದ ಏನೂ ಪ್ರಯೋಜನವಾಗಿಲ್ಲ.
೧೯೬೦ ರಲ್ಲಿ ಮಹಾರಾಷ್ಟ್ರದಲ್ಲಿ ಪಕ್ಷಾಂತರ ಪರ್ವ ಆರಂಭವಾಯಿತು. ಆಗಲೇ ಆಯಾರಾಂ ಗಯಾರಾಂ ಪದ ಜಾಲ್ತಿಗೆ ಬಂದಿತು. ಬೆಳಗ್ಗೆ ಒಂದು ಪಕ್ಷ ಸಂಜೆ ಮತ್ತೊಂದು ಪಕ್ಷಕ್ಕೆ ಹೋಗಿ ರಾತ್ರಿ ಬೇರೆ ಪಕ್ಷ ಸೇರಿದ ಘಟನೆಗಳು ಸಂಭವಿಸಿವೆ. ಇವುಗಳನ್ನು ನಿಯಂತ್ರಿಸಬೇಕೆಂದು ೧೯೮೫ ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಬಂದಿತು. ಇದಾದ ಮೇಲೆ ಬೇಕಾದಷ್ಟು ಜನಪ್ರತಿನಿಧಿಗಳು ಪಕ್ಷ ಬದಲಾಯಿಸಿದ್ದಾರೆ. ಯಾವುದೂ ಕಾಯ್ದೆಯ ವ್ಯಾಪ್ತಿಗೆ ಬಂದಿಲ್ಲ.
ಈಗ ಆಪರೇಷನ್ ಹೆಸರಿನಲ್ಲಿ ಪಕ್ಷಾಂತರ ನಡೆಯುತ್ತಲೇ ಇದೆ. ಇದು ತಪ್ಪು ಎಂದು ಒಬ್ಬ ರಾಜಕಾರಣಿಯೂ ಹೇಳಿಲ್ಲ. ಪ್ರಜಾಪ್ರಭುತ್ವದಲ್ಲಿ ೫ ವರ್ಷಕೊಮ್ಮೆ ಚುನಾವಣೆ ನಡೆಸುವ ಮೂಲ ಉದ್ದೇಶ ಸ್ಥಿರ ಸರ್ಕಾರ ಇರಬೇಕೆಂಬುದೇ ಆಗಿದೆ. ಬಹುಮತ ಪಡೆದ ಸರ್ಕಾರವನ್ನು ಕೆಲವೇ ಶಾಸಕರು ಉರುಳಿಸಬಹುದು ಎಂದಾಗಿರುವುದು ಪ್ರಜಾಪ್ರಭುತ್ವದ ಪ್ರಹಸನ. ಜನಾದೇಶ ಪಡೆದ ಸಂಸದ ಅಥವಾ ಶಾಸಕ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬೇರೆ ಪಕ್ಷದಿಂದ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಶೀಲನಾಗುತ್ತಾನೆ. ಇದರಿಂದ ಜನರೇ ಆಯ್ಕೆ ಮಾಡಿದ ಸರ್ಕಾರ ಬೀಳುತ್ತದೆ. ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅಂದರೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ಪಕ್ಷಾಂತರಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗಿದೆ. ವಿಚಿತ್ರದ ಸಂಗತಿ ಎಂದರೆ ಪಕ್ಷ ಬದಲಿಸಿ ಬಂದ ಜನಪ್ರತಿನಿಧಿಗೇ ಜನ ಮತ್ತೆ ಮತ ನೀಡುತ್ತಾರೆ ಎಂದರೆ ಜನರೇ ಪಕ್ಷಾಂತರಕ್ಕೆ ಉತ್ತೇಜನ ನೀಡುತ್ತಾರೆ ಎಂದಾಗುತ್ತದೆ. ನಾವು ಜನತಾ ನ್ಯಾಯಾಲಯವೇ ದೊಡ್ಡದು. ಅಲ್ಲಿ ಪಕ್ಷಾಂತರಕ್ಕೆ ಉತ್ತೇಜನ ನೀಡುವಂತಾದರೆ ಪ್ರಜಾಪ್ರಭುತ್ವ ಮೌಲ್ಯವನ್ನು ರಕ್ಷಿಸುವವರು ಯಾರು.
ಅದರಿಂದ ಜನ ಮೊದಲು ಪಕ್ಷಾಂತರದ ಬಗ್ಗೆಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಪಕ್ಷಾಂತರ ಮಾಡಿದವರು ಯಾವುದೇ ಪಕ್ಷವಾಗಲಿ ಅವರಿಗೆ ಮತನೀಡುವುದಿಲ್ಲ ಎಂದು ನಿರ್ಣಯ ಕೈಗೊಳ್ಳಬೇಕು. ಇದು ಸ್ವಯಂಪ್ರೇರಣೆಯಿಂದ ನಡೆಯಬೇಕು. ಕೆಲವು ದೇಶಗಳಲ್ಲಿ ಜನಪ್ರತಿನಿಧಿ ತಮ್ಮ ನಿರ್ಣಯದಂತೆ ಕೆಲಸ ಮಾಡಲಿಲ್ಲ ಎಂದರೆ ಅವರನ್ನು ಹಿಂದಕ್ಕ ಕರೆಸಿಕೊಳ್ಳುವ ಅಧಿಕಾರವನ್ನು ಮತದಾರರು ಪಡೆದಿರುತ್ತಾರೆ. ಜಯಪ್ರಕಾಶ್ ನಾರಾಯಣ್ ಅವರು ಇದನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದರು.
ಆದರೆ ನಮ್ಮಲ್ಲಿ ಜನಸಂಖ್ಯೆ ಅಧಿಕವಾಗಿರುವುದರಿಂದ ಇದನ್ನು ಜಾರಿಗೆ ತರುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಸ್ಪೀಕರ್ ಪಾತ್ರ ಪ್ರಮುಖ. ಪಕ್ಷಾಂತರ ಆಗಿದೆಯೇ ಇಲ್ಲವೆ ಎಂಬುದನ್ನು ಅವರೇ ತೀರ್ಮಾನಿಸಬೇಕು. ಈ ತೀರ್ಮಾನಕ್ಕೆ ಕಾಲಮಿತಿ ಏನೂ ಇಲ್ಲ. ಸ್ಪೀಕರ್ ೬ ತಿಂಗಳಿನಿಂದ ೩ ವರ್ಷದವರೆಗೆ ತೀರ್ಮಾನ ಕೈಗೊಳ್ಳದೇ ಇದ್ದ ಪ್ರಕರಣಗಳಿವೆ. ನ್ಯಾಯಾಲಯ ಕೂಡ ಸ್ಪೀಕರ್ ಅಧಿಕಾರವನ್ನು ಪ್ರಶ್ನಿಸಲು ಹೋಗಿಲ್ಲ. ಸ್ವತಂತ್ರವಾಗಿ ಚುನಾಯಿತಗೊಂಡ ಜನಪ್ರತಿನಿಧಿ ಸ್ವತಂತ್ರ ತೀರ್ಮಾನ ಕೈಗೊಳ್ಳಬಹುದು. ರಾಜಕೀಯ ಪಕ್ಷಗಳಲ್ಲಿ ವಿಪ್ ಕೊಡುವುದು ಪ್ರಮುಖ ಕೆಲಸವಾಗಿದೆ. ವಿಪ್ ಉಲ್ಲಂಘಿಸಿದವರನ್ನು ಪಕ್ಷದಿಂದ ಹೊರಹಾಕಲು ಅವಕಾಶವಿದೆ. ಅದೇರೀತಿ ವಿಪ್ ಜನಪ್ರತಿನಿಧಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂಬ ಅಭಿಪ್ರಾಯವೂ ಇದೆ.
ಉಪರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ಹೇಳಿದಂತೆ ಪಕ್ಷಾಂತರಕ್ಕೆ ರಾಮಬಾಣ ಎಂದರೆ ಅವಿಶ್ವಾಸ ನಿರ್ಣಯ ಪಡೆದುಕೊಳ್ಳುವುದು. ಒಮ್ಮೆ ಇದರಿಂದ ಪಾರಾದರೆ ೬ ತಿಂಗಳು ಜೀವದಾನ ಲಭಿಸಿದಂತೆ. ಜನ ಒಮ್ಮೆ ತೀರ್ಮಾನ ಕೈಗೊಂಡಲ್ಲಿ ಅದರಿಂದ ವಿಚಲಿತರಾಗಬಾರದು. ಪಕ್ಷಾಂತರಿಗಳು ಯಾರೇ ಆಗಿರಲಿ ನಮ್ಮ ಮತ ಅವರಿಗಿಲ್ಲ ಎಂದು ಜನಸಾಮಾನ್ಯರು ತೀರ್ಮಾನಿಸಿದರೆ ಪಕ್ಷಾಂತರ ನಿಂತು ಹೋಗುತ್ತದೆ. ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ಮೇಲೆ ಯಾರು ಯಾವ ಪಕ್ಷದಿಂದ ಬೇಕಾದರೂ ಸ್ಪರ್ಧಿಸಲಿ. ಅದು ಪಕ್ಷಾಂತರವಾಗುವುದಿಲ್ಲ.