ರಥವಾನೇರಿದ ರಾಘವೇಂದ್ರ…. ಸದ್ಗುಣ ಗಣ ಸಾಂದ್ರ….

Advertisement

ಹುಬ್ಬಳ್ಳಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧನಾ ಮಹೋತ್ಸವದ ಮೂರನೇ ದಿನವಾದ ಶನಿವಾರ ಉತ್ತರಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾರಥೋತ್ಸವ ವೈಭವದಿಂದ ಜರುಗಿತು.
ಉತ್ತರಾರಾಧನೆ ಪ್ರಯುಕ್ತ ನಗರದ ವಿವಿಧ ರಾಯರ ಮಠದಲ್ಲಿ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ, ಅರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ, ಮಹಾ ಮಂಗಳಾರತಿ, ಪ್ರವಚನ, ರಥೋತ್ಸವ ಹಾಗೂ ವಿವಿಧ ಮಹಿಳಾ ಭಜನಾ ತಂಡದ ಸದಸ್ಯೆಯರು ಭಜನೆ ಮಾಡಿದರು.
ರಾಯರ ದರ್ಶನ ಪಡೆದು ಕೃತಾರ್ಥರಾದ ಭಕ್ತರು ಉರುಳು ಸೇವೆ, ದೀರ್ಘ ದಂಡ ಸೇರಿದಂತೆ ನಾನಾ ಸೇವೆಗಳನ್ನ ಸಲ್ಲಿಸಿದರು. ಬಳಿಕ ಫಲ ಮಂತ್ರಾಕ್ಷತೆ ಪಡೆದರು. ಮೂರನೇಯ ದಿನ ರಥೋತ್ಸವ ಅಂಗವಾಗಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ರಾಘವೇಂದ್ರಸ್ವಾಮಿಗಳ ರಥೋತ್ಸವವನ್ನು ಕಣ್ತುಂಬಿಕೊಂಡರು.
ಉತ್ತರಾರಾಧನೆ ಪ್ರಯುಕ್ತ ಭವಾನಿನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಹಾ ರಥೋತ್ಸವ, ಅರ್ಚನೆ, ಕನಕಾಭಿಷೇಕ, ನೈವೇದ್ಯ, ಹಸ್ತೋದಕ ನೆರವೇರಿತು. ಮಠದ ಆವರಣದಲ್ಲಿ ರಥೋತ್ಸವ ನೋಡಲು ಜನರು ಕಿಕ್ಕಿರಿದು ತುಂಬಿದ್ದರು. ರಾಯರ ರಥೋತ್ಸವ ಮಠದ ಆವರಣಕ್ಕೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ, ಗುಲಾಲ್ ಎರಚಿ ಸಂಭ್ರಮಿಸಲಾಯಿತು.

ವಿಶ್ವೇಶ್ವರ ನಗರ (ಶಾಂತಿ ಕಾಲನಿ) ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಮಠದಲ್ಲಿ ವಿಶೇಷ ಪೂಜೆ, ನಡೆಯಿರತು. ಸಂಜೆ ತಾರತಮ್ಯ ಭಜನೆ, ಪಂ. ಸದಾಶಿವ ಐಹೊಳೆ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು.
ನವನಗರದ ಪರಿಮಳ ಮಾರ್ಗ ರಾಯರ ಮಠದಲ್ಲಿ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಅಭಿಷೇಕ, ಅಲಂಕಾರ ಮತ್ತು ಹಸ್ತೋದಕ, ಪ್ರಸಾದ, ಪಾಲಕಿ ಸೇವೆ, ಅಷ್ಟಾವಧಾನ ಸೇವೆ, ರಥಾಂಗ ಹೋಮ, ರಥೋತ್ಸವ ಹಾಗೂ ಸಮಗೀತ ಸೇವೆಗಳು ನೆರವೇರಿದವು. ಸಂಜೆ ಪ್ರಾಚಿ ದೀಕ್ಷಿತ, ಚೈತ್ರಾ ಕುಲಕರ್ಣಿ, ಅನನ್ಯಾ ಪಾಮಡಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ರಾಮಕೃಷ್ಣ ನಗರದ ಭಕ್ತಾದಿಗಳ ರಾಯರ ಮಠದಲ್ಲಿ ಸುಪ್ರಭಾತ ಸೇವೆ, ಅಷ್ಟೋತ್ತರ ಪಾರಾಯಣ, ರಥೋತ್ಸವ, ಪ್ರಸಾದ, ಹಸ್ತೋದಕ ಕಾರ್ಯಕ್ರಮಗಳು ನೆರವೇರಿದವು. ಕುಸುಗಲ್ಲ ರಸ್ತೆಯ ಕುಬೇರಪುರಂ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಥಾಂಗ ಹೋಮ, ಅಷ್ಟಾಕ್ಷರ ಹೋಮ ಮತ್ತು ರಥೋತ್ಸವ ನೆರವೇರಲಿದೆ. ಸೆ.೩ ರಂದು ಬೆಳಗ್ಗೆ ೯ ಕ್ಕೆ ವಾರ್ಷಿಕ ಸಂಕಷ್ಟಿ ನಿಮಿತ್ತ ಗಣಹೋಮ ಹಮ್ಮಿಕೊಳ್ಳಲಾಗಿದೆ.
ವಿದ್ಯಾನಗರದ ಪರಿಮಳ ಮಾರ್ಗದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಜತ ಮಹೋತ್ಸವ ಹಾಗೂ ಉತ್ತರಾರಾಧನೆಯ ನಿಮಿತ್ತ ಶ್ರೀ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಶಪಾಂಡೆನಗರದ ಕೃಷ್ಣ ಕಲ್ಯಾಣಮಂಟಪದಲ್ಲೂ ಕೂಡ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೫೨ ನೇ ಆರಾಧನೆ ನಿಮಿತ್ತ ಹಳೇಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯಕ್ಕೆ ಪಂಡಿತ ಶ್ರೀ ನರಹರಿ ಆಚಾರ್ಯ ವಾಳ್ವೇಕರ ಅವರು ಭೇಟಿ ನೀಡಿ ಅಲ್ಲಿನ ರೋಗಿಗಳಿಗೆ ಶ್ರೀ ಗುರು ರಾಯರ ಫಲ ಮಂತ್ರಾಕ್ಷತೆ ನೀಡಿ ಶೀಘ್ರವಾಗಿ ಗುಣಮುಖರಾಗಲೆಂದು ಆಶಿರ್ವದಿಸಿದರು.