ವೃದ್ಧೆಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ

Advertisement

ಕುಷ್ಟಗಿ: ತಾಲೂಕಿನ ನಿಡಶೇಸಿ ಗ್ರಾಮದ ಶಿವಶರಣೆ ಶಿವಮ್ಮ ಸಜ್ಜನ ಎಂಬ ವೃದ್ಧೆಗೆ ಶೌಚಾಲಯ ನಿರ್ಮಿಸಿ ಕೊಡುವುದಾಗಿ ಪಿಡಿಓ ಭರವಸೆ ನೀಡಿದ್ದಾರೆ.
ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಸೆ. ೨ರಂದುಗೃಹಲಕ್ಷ್ಮೀ ಎರಡು ಸಾವಿರ ನಿರಾಕರಿಸಿದ ವೃದ್ಧೆ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು. ಎಚ್ಚೆತ್ತ ಅಧಿಕಾರಿಗಳು ವೃದ್ಧೆ ಮನೆಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.
ಸಾಕಷ್ಟು ಬಾರಿ ತಳವಗೇರಾ ಗ್ರಾಪಂಗೆ ವೃದ್ಧೆ ಶೌಚಾಲಯ ನಿರ್ಮಿಸಿಕೊಡುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಾಸಿಕ ೨೦೦೦ ರೂ. ತೆಗೆದುಕೊಳ್ಳದೆ ವೃದ್ಧೆ ನಿರಾಕರಿಸಿದ್ದರು.
ವರದಿ ನೋಡಿದ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಓ ರಾಹುಲ್ ರತ್ನಮ್ ಪಾಂಡೆಯ ಹಾಗೂ ಪಿಡಿಓಗೆ ವೃದ್ಧೆಗೆ ಶೌಚಾಲಯ ನಿರ್ಮಿಸಿಕೊಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕಾರ್ಯಪ್ರವೃತ್ತರಾದ ಪಿಡಿಓ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸೂಪರ್‌ವೈಸರ್ ಅನ್ನಪೂರ್ಣ ಪಾಟೀಲ, ವೃದ್ಧೆ ಮನೆಗೆ ಶನಿವಾರ ಸಂಜೆ ದಿಢೀರ್ ಭೇಟಿ ನೀಡಿ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.
ನನ್ನದು ಸುಖಿ ಜೀವನ. ನನಗೇನೂ ಬೇಕಾಗಿಲ್ಲ. ಅಧಿಕಾರಿಗಳು ಮತ್ತೆ ಮತ್ತೆ ಮನವಿ ಮಾಡಿದ್ದರಿಂದ ನನಗೆ ಸಹಾಯ ಮಾಡಬೇಕು ಎಂಬುದಾದರೆ ಶೌಚಾಲಯ ನಿರ್ಮಿಸಿಕೊಡಿ ಅಷ್ಟು ಸಾಕು, ಮತ್ತೇನೂ ಬೇಡ ಎಂದು ವೃದ್ಧೆ ಮನವಿ ಮಾಡಿದರು. ಪಿಡಿಓ ಸ್ಪಂದಿಸಿ, ಇನ್ನು ೧೫ ದಿನದೊಳಗೆ ಶೌಚಾಲಯ ನಿರ್ಮಿಸಿಕೊಡಲಾಗುವುದು ಎಂದರು.
ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಪತ್ರದ ಮೂಲಕ ವೃದ್ಧೆ ಧನ್ಯವಾದ ಅರ್ಪಿಸಿದ್ದಾರೆ.