ಕಾವೇರಿ ತೀರ್ಪು ಕನ್ನಡಿಗರ ಪರ ಬರಲಿ: ಮಂಡ್ಯದಲ್ಲಿ ಕಾವೇರಿ ಮಾತೆಗೆ ಅಭಿಷೇಕ

Advertisement

ಮಂಡ್ಯ : ತಮಿಳುನಾಡಿಗೆ ನಿರಂತರ ನೀರು ಹರಿಸಿ ಕಾವೇರಿ ಕೊಳ್ಳದ ಜಲಾಶಯ ಬರಿದು ಮಾಡಿರುವ ಸರ್ಕಾರದ ಮೇಲಿನ ನಂಬಿಕೆ ಹುಸಿಯಾದ ಹಿನ್ನಲೆಯಲ್ಲಿ ಕಾವೇರಿ ಮಾತೆಗೆ ಅಭಿಷೇಕ ಮಾಡಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದ ತೀರ್ಪು ಕರ್ನಾಟಕದ ಪರ ಬರಲಿ ಎಂದು ಪ್ರಾರ್ಥಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನವನದಲ್ಲಿರುವ ಕಾವೇರಿ ಮಾತೆಗೆ ಕಾವೇರಿ ನದಿಯಿಂದ ತಂದಿದ್ದ ನೀರಿನ ಮೂಲಕ ಜಲಾಭಿಷೇಕ ಮಾಡಿ,ಹಾಲು, ಅರಿಶಿನ. ಕುಂಕುಮ ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಎಳನೀರು ಅಭಿಷೇಕ ಮಾಡಿ ಹಸಿರು ಸೀರೆ ಹೊದಿಸಿ ಪುಷ್ಪಾರ್ಚನೆ ಮೂಲಕ ವಿಶೇಷ ಪೂಜೆ ಸಲ್ಲಿಸಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪ್ರಾರ್ಥನೆ ಮಾಡಿದರು.
ಕಾವೇರಿಕೊಳ್ಳದ ಕೆ ಆರ್ ಎಸ್ ಮತ್ತು ಕಬಿನಿ ಜಲಾಶಯದ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿತ ಕಾಣುತ್ತಿದ್ದರೂ ಇಂದಿಗೂ ಸಹ ಪ್ರತಿನಿತ್ಯ ನೀರು ಬಿಡುಗಡೆ ಮಾಡುತ್ತಿದೆ, ಇದ್ದ ನೀರೆಲ್ಲ ಖಾಲಿಯಾಗುತ್ತಿದೆ, ಆಳುವ ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳ ಮೇಲೆ ಇಟ್ಟಿದ್ದ ನಂಬಿಕೆ ಸಂಪೂರ್ಣ ಹುಸಿಯಾಗಿರುವುದರಿಂದ ನಮಗೆ ಕಾವೇರಿ ಮಾತೆ ದಿಕ್ಕು ಎಂದು ಹೇಳಿದರು,
ಕಾವೇರಿ ಮಾತೆಯನ್ನು ನಂಬಿ ಬದುಕು ಸಾಧಿಸುತ್ತಿರುವ ರೈತರ ಕಾಪಾಡಲು ಕಾವೇರಮ್ಮ ಮಳೆಯನ್ನಾದರೂ ಸುರಿಸಿ ಸಮಸ್ಯೆಗೆ ಪರಿಹಾರ ರೂಪಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಇದರ ಜೊತೆಗೆ ಸೆ. 6 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು,ತೀರ್ಪು ಕರ್ನಾಟಕದ ಪರ ಬರಲಿ ಎಂದು ಆಶಿಸಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ರಾಜ್ಯವನ್ನಾಳಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರು ದಪ್ಪ ಚರ್ಮದವರಾಗಿದ್ದಾರೆ ಇವರಿಗೆ ರೈತರ ಕೂಗು ಕೇಳಿಸುತ್ತಿಲ್ಲ, ನಾಡಿನ ಜನರ ಬಲಿಕೊಟ್ಟು ರಾಜಕಾರಣ ಮಾಡಲು ಮುಂದಾಗಿದ್ದಾರೆ, ರೈತರ ಸಂಕಷ್ಟಕ್ಕೆ ಸ್ಪಂದಿಸದೆ ಜಲಾಶಯಗಳಿಂದ ನೆರೆರಾಜಕ್ಕೆ ಹರಿಸುತ್ತಿರುವ ನೀರು ನಿಲ್ಲಿಸಿ ರೈತರ ಹಿತ ಕಾಪಾಡಲು ಮುಂದಾಗಿಲ್ಲ ಎಂದು ಕಿಡಿ ಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ, ಕಾವೇರಿ ನಿಯಂತ್ರಣ ಸಮಿತಿ, ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾಸ್ತವ ವಿಚಾರ ಮಂಡನೆ ಮಾಡುವಲ್ಲಿ ವಿಫಲವಾಗಿದೆ, ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ವಾಸ್ತವ ಮನವರಿಕೆ ಮಾಡಿಕೊಡಲು ಮುಂದಾಗ ಬೇಕಾಗಿದೆ, ರಾಜ್ಯದ ಸಂಸದರು ಮತ್ತು ಶಾಸಕರು ದನಿ ಎತ್ತುತ್ತಿಲ್ಲ, ಕಾವೇರಿ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದ್ದರೂ ಹೋರಾಟ ಮಾಡಲು ಮುಂದಾಗಿಲ್ಲ ಎಂದು ಆಕ್ರೋಶಿಸಿದರು,
ಕರ್ನಾಟಕಕ್ಕೆ ಸದ್ಯದ ಸ್ಥಿತಿಯಲ್ಲಿ ದೇವರೇ ದಿಕ್ಕು, ಕಾವೇರಿ ವಿಚಾರದಲ್ಲಿ ಆಳುವ ಸರ್ಕಾರ ನ್ಯಾಯ ಕೊಡಿಸುವ ಬದಲಾಗಿ ನೀರು ಬಿಡುವುದನ್ನು ಕಾಯಕ ಮಾಡಿಕೊಂಡಿದೆ, ಬರ ಪರಿಸ್ಥಿತಿ ತಲೆದೂರಿದೆ, ಜಲಾಶಯಗಳು ಬರಿದಾಗಿವೆ. ರೈತರ ಬೆಳೆ ನೀರಿಲ್ಲದೆ ಒಣಗುತ್ತಿವೆ, ಹೊಸ ಬೆಳೆ ನಾಟಿ ಮಾಡಲು ನೀರಿಲ್ಲದಂತಾಗಿದೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪರಿಸ್ಥಿತಿ ತಂದೊಡ್ಡಿದೆ ಎಂದು ಹೇಳಿದರು. ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಉಮಾ ಶಂಕರ್, ಯೋಗೇಶ್ ಗೌಡ,ಅಜಯ್,ಗೌಡಗೆರೆ ಧನಂಜಯ, ರೋಸಿ.ನಿರ್ಮಲ,ಮಂಗಳಮ್ಮ,ರಾಜಮ್ಮ ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ನಂದನ್‌ಗೌಡ ನೇತೃತ್ವ ವಹಿಸಿದ್ದರು.