ಡಿಸಿಎಂ ಡಿಕೆಶಿ ಆತ್ಮಹತ್ಯೆಗೆ ೨೫ ಕೋಟಿ ರೂ: ಯತ್ನಾಳ

ಯತ್ನಾಳ
Advertisement

ಕೊಪ್ಪಳ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆತ್ಮಹತ್ಯೆ ಮಾಡಿಕೊಂಡರೆ ೨೫ ಕೋಟಿ ರೂ. ಮತ್ತು‌ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೆ ೫ ಕೋಟಿ ರೂ. ಪರಿಹಾರ ನೀಡುತ್ತೇವೆ. ಹಾಗಾಗಿ ಡಿಕೆಶಿ ಆತ್ಮಹತ್ಯೆ ಮಾಡಿಕೊಳ್ಳಲಿ. ರಾಜ್ಯದ ಒಂದು ಪೀಡೆ ತೊಲಗಿತು ಎಂದುಕೊಳ್ಳುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದಲ್ಲಿ ಶನಿವಾರ ನನ್ನ ಮಣ್ಣು, ನನ್ನ ದೇಶ ಎಂಬ ಕಾರ್ಯಕ್ರಮದ ಬಳಿಕ ಸುದ್ದಿಗಾರರ ರೈತರ ಆತ್ಮಹತ್ಯೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ ಮತ್ತು ಸಚಿವ ಶಿವಾನಂದ ಪಾಟೀಲರ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವುದೇ ಒಬ್ಬ ರೈತ ಆತ್ಮಹತ್ಯೆ ಸುಮ್ಮನೆ ಮಾಡಿಕೊಳ್ಳುವುದಿಲ್ಲ. ಇವರಿಗೆ ಸಾಮಾನ್ಯಜ್ಞಾನ ಇಲ್ಲವೇ. ಜೀವನದಲ್ಲಿ ಜಿಗುಪ್ಸೆಗೊಂಡು, ಕಣ್ಮುಂದೆ ಏನೂ ದಾರಿ ಕಾಣದಿದ್ದಾಗ, ಏನೂ ಇಲ್ಲದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲದೇ ಮೊದಲು ತಮ್ಮ ಮಕ್ಕಳಿಗೆ ವಿಷ ನೀಡಿ, ಸಾಯಿಸಿ, ಬಳಿಕ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಾಯಬೇಕು ಎಂದು ಯಾರಿಗೂ ಇರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ೧೩೫ ಸ್ಥಾನ ಗೆದ್ದಿದ್ದೇವೆ ಎಂದು ರಾಜ್ಯದಲ್ಲಿ ಸಾಯುವವರೆಗೂ ನಾವೇ ಆಡಳಿತ ಮಾಡುತ್ತೇವೆ ಎಂದುಕೊಂಡಿದ್ದಾರೆ. ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೈತರಿಗೆ ೩ ತಾಸು ವಿದ್ಯುತ್ ಸರಬರಾಜು ಆಗುತ್ತಿಲ್ಲ. ಹೀಗಿರುವಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳಾದರೆ ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರೈತರಿಗೆ ಧೈರ್ಯ ತುಂಬಬೇಕು. ಹೆದರಬೇಡಿ. ನಿಮ್ಮ ಸಾಲ ಮನ್ನಾ ಮಾಡುತ್ತೇವೆ. ನಿಮಗೆ ಕಷ್ಟಗಳಿದ್ದರೇ ಹೇಳಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ, ಏನಿದ್ದರೂ ಪರಿಹಾರ ಮಾಡುತ್ತೇವೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಹೇಳಬೇಕಾದರೂ, ೫ ಲಕ್ಷ ರೂ.ಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುತ್ತಿರುವುದು ದುರ್ಧೈವದ ಸಂಗತಿ. ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ ಇವರ(ಕಾಂಗ್ರೆಸ್) ನಾಶ ಕಾಲ ಬಂದಿದೆ ಎಂದರು.
ರೈತರಿಂದ ಏನೂ ಲಾಭ ಇಲ್ಲ. ಕೈಗಾರಿಕೆಯಿಂದ ಮಾತ್ರ ಲಾಭ ಇದೆ ಎಂದು ಹಿಂದೆಯೂ ಡಿ.ಕೆ.ಶಿವಕುಮಾರ ಹೇಳಿದರು. ರೈತರು ಬೆಳೆ ಬೆಳೆಯದಿದ್ದರೇ ಕಬ್ಬಿಣ ತಿನ್ನುತ್ತಾರೋ, ಬೇರಿಂಗ್ ತಿನ್ನುತ್ತಾರೋ. ಇಂತವರೆಲ್ಲ ಲಕ್ಷಗಟ್ಟಲೇ ಮತದಿಂದ ಆರಿಸಿ ಬಂದಿದ್ದಾರೆ. ಉಪಮುಖ್ಯಮಂತ್ರಿ ಆಗಿದ್ದಾರೆ. ಬಾಯಿ ತಾಳ ಇಲ್ಲ, ಮೇಳ ಇಲ್ಲ. ಹಾಗಾಗಿ ಜನರು ತಿಳಿದುಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದರು.