ಅನಿಷ್ಟ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ

CM
Advertisement

ಹಾವೇರಿ: ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ ಎಂದು ಹೇಳಿಲ್ಲ. ಹಾವೇರಿ ಕ್ಷೇತ್ರದ ಅಭ್ಯರ್ಥಿ ಎಂದೂ ಹೇಳಿಲ್ಲ. ಇವೆಲ್ಲ ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಹಾವೇರಿಯ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಾನು ನಿಲ್ಲುವ ಪ್ರಶ್ನೆ ಇಲ್ಲ, ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ನಾನು ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ. ಲೋಕಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡಬೇಕು. ಟಿಕೆಟ್ ವಿಚಾರದ ಬಗ್ಗೆ ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಸರ್ಕಾರದ ವಿರುದ್ದ ಜನಾಂದೋಲನ ರೂಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ. ಸರ್ಕಾರ ಬಂದ ಮೇಲೆ ಸಂಪೂರ್ಣ ಅಭಿವೃದ್ಧಿ ನಿಂತು ಹೋಗಿದೆ. ಬಿಜೆಪಿ ಶಾಸಕರು, ಬಿಜೆಪಿ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2ಗೆ ಬಹಳಷ್ಟು ವ್ಯತ್ಯಾಸ ಇದೆ.
ವರ್ಗಾವಣೆ ದಂಧೆ ನಡೆದಿದೆ. ಭ್ರಷ್ಟಾಚಾರ ಅವರ ಮೂಗಿನ ನೇರಕ್ಕೆ ನಡೆದರೂ ಏನೂ ಮಾಡದ ಸ್ಥಿತಿಯಲ್ಲಿದ್ದಾರೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನುವುದು ಸರ್ಕಾರದ ನೀತಿಯಾ ? ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇವೆಗೌಡರು ಅಮಿತ್ ಶಾ ಭೇಟಿ ಸ್ವಾಗತಾರ್ಹ. ಅನಿಷ್ಟ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎನ್ನುವುದು ಎಲ್ಲರ ಭಾವನೆಯಿದೆ. ಜೆಡಿಎಸ್ನವರು ಸಹ ಸ್ಪಷ್ಟತೆ ಹೇಳುತ್ತಿಲ್ಲ. ಅಂಕಿ ಸಂಖ್ಯೆಗಳು ಏನು ಎನ್ನುವುದು ಕೆಲವು ವಾರಗಳ ನಂತರ ಸಿಗುತ್ತದೆ.
ವಿಪಕ್ಷ ನಾಯಕನ ಆಯ್ಕೆ ವಿಳಂಬ ಯಾಕಾಗುತ್ತಿದೆ ಎನ್ನುವುದು ಗೊತ್ತಿಲ್ಲ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಒಟ್ಟಿಗೆ ಮಾಡುವ ಕಾರಣಕ್ಕೆ ವಿಳಂಬ ಆಗುತ್ತಿರಬಹುದು ಎಂದು ಅವರು ಹೇಳಿದರು.