ಶ್ರೀರಂಗಪಟ್ಟಣ: ಕಾವೇರಿ ನೀರು ಹಂಚಿಕೆ ವಿಷಯವಾಗಿ ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನಿಂದ ರಾಜ್ಯದ ವಿರುದ್ದ ತೀರ್ಪು ಬಂದರೆ, ಜಿಲ್ಲೆಯ ಶಾಸಕರುಗಳು ಜಿಲ್ಲೆಯ ರೈತರ ಪರ ನಿಲ್ಲುವುದಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಅರಕೆರೆ ಹಾಗೂ ವಡೆಯಾಂಡಾಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿಗೆ ಹೆಚ್ಚಿನ ನೀರುಹರಿಸಲಾಗಿದೆ. ಇರುವ ನೀರು ಜಿಲ್ಲೆಯ ಜನತೆಗೆ ಕುಡಿಯಲು ಹಾಗೂ ಬೆಳೆದಿರುವ ಬೆಳೆಗಳಿಗೆ ಸಾಲದಂತಾಗಿದೆ. ಕಾವೇರಿ ಜಲಾಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ, ಅಣೆಕಟ್ಟೆಗಳು ಭರ್ತಿಯಾಗದೆ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಮತ್ತೆ ತಮಿಳುನಾಡಿಗೆ ನೀರು ಬಿಡಲು ತಿಳಿಸಿದರೆ, ಜಿಲ್ಲೆಯ ಶಾಸಕರುಗಳು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸರ್ಕಾರವೂ ಕೂಡ ರಾಜ್ಯದ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದರು.