ನಾನು ಬಿಜೆಪಿಯಲ್ಲಿಯೇ ಇದ್ದೇನೆ

Advertisement

ದಾವಣಗೆರೆ: ಬಿಜೆಪಿಯಿಂದ ನಾನು ಲೋಕಸಭೆ ಚುನಾವಣೆಯ ಟಿಕೇಟ್ ಆಕಾಂಕ್ಷಿಯಾಗಿದ್ದು, ನಾನು ಬಿಜೆಪಿಯಲ್ಲೇ ಇದ್ದೇನೆ, ಪಕ್ಷದ ತೀರ್ಮಾನವನ್ನು ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾರ್ಮಿಕವಾಗಿ ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನನಗೆ ಹೆತ್ತ ತಾಯಿಗೆ ಸಮಾನ, ಆದರೆ ಕೆಲವರ ದೌರ್ಲಭ್ಯಗಳ ಬಗ್ಗೆ ಮಾತನಾಡಿದ್ದೆ. ನಾನು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದಿಲ್ಲ, ಅವರು ಸಹ ನನ್ನನ್ನು ಕರೆದಿಲ್ಲ, ಮಾಜಿ ಸಚಿವ ಜಗದೀಶ್ ಶೆಟ್ಟರ್ ಕರೆ ಮಾಡಿದ್ದು ನಿಜ. ಸೌಹಾರ್ದಯುತವಾಗಿ ಕರೆ ಮಾಡಿ ಮಾತನಾಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು ವಿಶ್ವಾಸದಲ್ಲಿ ಆಹ್ವಾನ ಮಾಡಿರುವುದರಿಂದ ಅವರ ನಿವಾಸಕ್ಕೆ ಬಂದಿರುವೆ. ರಾಜಕೀಯ ಹೊರತಾಗಿ ಕ್ಷೇತ್ರದ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜಿಲ್ಲೆಗೆ ಜಿಲ್ಲಾಧ್ಯಕ್ಷರ ಕೊಡುಗೆ ಏನಿದೆ, ಚುನಾವಣೆ ಸಮಯದಲ್ಲಿ ಕ್ಷೇತ್ರಗಳಿಗೆ ಅವರು ಭೇಟಿ ನೀಡಿದ್ದರಾ? ಯಾರೋ ಕಟ್ಟಿದ್ದ ಪಕ್ಷದಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು, ನನಗೆ ಎಚ್ಚರಿಕೆ ಕೊಡೋಕೆ ನೀನು ಯಾರು? ನನ್ನ ಬಗ್ಗೆ ಮಾತನಾಡಿದರೇ ಹುಷಾರು ಎಂದು ಪಕ್ಷದ ಜಿಲ್ಲಾಧ್ಯಕ್ಷರಿಗೆ ಎಚ್ಚರಿಕೆ ರವಾನಿಸಿದರು.