ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ

Advertisement

ಮಂಗಳೂರು: ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾತನಾಡಿ ಹೋರಾಟ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾತನಾಡಿ ಹೋರಾಟ ಮಾಡಬೇಕಿದೆ. ವಸ್ತುಸ್ಥಿತಿ ಅಧ್ಯಯನ ಮಾಡಿ ರಿಯಾಲಿಟಿ ಮೇಲೆ ಹೋಗಬೇಕಿದೆ. ಮಳೆ ಕೂಡ ಕಡಿಮೆಯಾಗಿ ನಮ್ಮಲ್ಲೇ ನೀರು ಇಲ್ಲ. ರಾಜಕೀಯವಾಗಿಯೂ ಎಲ್ಲರೂ ಒಗ್ಗಟ್ಟಾಗಿ ಚರ್ಚಿಸೋಣ. ಸಂಸದರು ದೆಹಲಿಯಲ್ಲಿ ಮಾತನಾಡಬೇಕು. ಸಿಎಂ ಪ್ರಧಾನಿ ಮೋದಿಯವರ ಸಮಯ ಕೇಳಿದ್ದಾರೆ. ಕೋರ್ಟ್‌ಗಳು ಆದೇಶ ಕೊಡ್ತದೆ, ಆದರೆ ಕೆಲ ವಿಚಾರಗಳಲ್ಲಿ ಜನರ ಪರ ನಿಲ್ಲಬೇಕಿದೆ ಎಂದರು.
ಇನ್ನು ರಾಜ್ಯದಲ್ಲಿ ಮೂವರು ಡಿಸಿಎಂಗಳ ಬಗ್ಗೆ ಚರ್ಚೆ ವಿಚಾರವಾಗಿ ಮಾತನಾಡಿ, ಮೂವರು ಡಿಸಿಎಂ ಮಾಡಿದ್ರೆ ತಪ್ಪೇನಿಲ್ಲ, ಆದರೆ ಅದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇದನ್ನ ಬಹಿರಂಗವಾಗಿ ಚರ್ಚೆ ಮಾಡುವ ಅಗತ್ಯ ಇಲ್ಲ. ಸಿ.ಟಿ. ರವಿ ಸೋತು ಸುಣ್ಣ ಆಗಿದ್ದಾರೆ, ಅವರು ಸುಮ್ಮನಿದ್ದರೆ ಒಳ್ಳೆಯದು. ವಿಧಾನಸಭೆಯಿಂದಲೂ ಜನ ಮನೆಗೆ ಕಳಿಸಿದ್ರು, ದೆಹಲಿಯಿಂದಲೂ ವಾಪಾಸ್ ಕಳಿಸಿದ್ದಾರೆ. ಅನಾವಶ್ಯಕವಾಗಿ ಬಾಯಿ ತೆಗೆಯೋದು ಸರಿಯಲ್ಲ. ಅವರಿಗೆ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಅವರಿಗೆ ಸುದ್ದಿಯಲ್ಲಿ ಇರಬೇಕು ಅನ್ನೋ ಹವ್ಯಾಸ ಆಗಿದೆ. ಚುನಾವಣಾ ಪೂರ್ವದಲ್ಲೂ ನಮ್ಮಲ್ಲಿ ಒಗ್ಗಟ್ಟಿಲ್ಲ ಅಂತ ಹೇಳಿದ್ರು. ಆದರೆ ನಾವು ಒಗ್ಗಟ್ಟಾಗಿ ಕೆಲಸ ಮಾಡಿ ಕೊನೆಗೆ ಏನಾಯ್ತು ಅಂತ ಗೊತ್ತಿದೆ. ಈಗಲೂ ಒಗ್ಗಟ್ಟಲ್ಲಿ ಇದ್ದೇವೆ, ರಾಜಕೀಯ ತೀರ್ಮಾನ ವರಿಷ್ಠರು ಮಾಡ್ತಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಸರಿಯಾಗಿ ಇದ್ದೇವೆ ಎಂದರು.
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಬಗ್ಗೆ ಚಿಂತನೆ ವಿಚಾರವಾಗಿ ಪ್ರತಿಕ್ರಿಯಿಸಿ, ಹುಕ್ಕಾ ಬಾರ್‌ಗಳಿಂದ ತೊಂದರೆ ಆಗ್ತಿದೆ, ಸಾರ್ವಜನಿಕರಿಗೆ ಅನಾರೋಗ್ಯ ಆಗ್ತಿದೆ. ನಮ್ಮ ಕಾಯಿದೆಗೆ ತಿದ್ದುಪಡಿ ಮಾಡಿ ಬದಲಾವಣೆ ತರಲು ಬಯಸಿದ್ದೇವೆ. ಹುಕ್ಕಾ ಬಾರ್‌ಗಳು ಬೇರೆ ಬೇರೆ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಅದರಲ್ಲಿ ಬೇರೆ ಮಿಶ್ರಣ ಮಾಡಿ ಹಾಕುವಂಥದ್ದು ಇದೆ. ಇಂಥದ್ದನ್ನ ನಿಯಂತ್ರಣ ಮಾಡೋದು ಬಹಳ ಕಷ್ಟ ಎಂದರು.