ತಮಿಳುನಾಡಿಗೆ ನಿರಂತರ ನೀರು: ಪ್ರತಿಭಟನೆ

Advertisement

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸದಸ್ಯರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ನೀರಾವರಿ ನಿಗಮ ಕಚೇರಿ ಎದುರಿನ ಕಾವೇರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ತೀರ್ಪು ಎಂದು ಪ್ರಾರ್ಥಿಸಿದರು.
ಬೈಕ್ ರಾಲಿ ಮೂಲಕ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಅಲ್ಲಿಂದ ಹೊರಟ ಹೊರಟ ಸದಸ್ಯರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿಯಲ್ಲಿ ಭಾಗಿಯಾದರು.
ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುತ್ತಿರುವ ಸರ್ಕಾರದ ಕುಡಿಯುವ ನೀರಿಗೆ ದೊಡ್ಡ ಕಂಟಕ ತರಲಿದೆ, ಕಾವೇರಿ ನದಿ ನೀರನ್ನು ತುರ್ತಾಗಿ ಉಳಿಸಬೇಕಾಗಿದೆ, ಕಾವೇರಿ ನದಿ ಪಾತ್ರದ ಜಿಲ್ಲೆಗಳ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ವಾಸ್ತವ ಸ್ಥಿತಿ ವರದಿಯನ್ನು ಅಧ್ಯಯನ ಮಾಡಬೇಕು. ಜಲಾಶಯಗಳಲ್ಲಿ ನೀರಿನ ಲಭ್ಯತೆ ಅವಲೋಕಿಸದೆ ನೀರು ಬಿಡುಗಡೆ ಮಾಡಿ ಎಂದು ಆದೇಶ ಮಾಡುವುದು ಅವೈಜ್ಞಾನಿಕ ಎಂದರು.
ರೈತರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನಿರುವ ಶಾಸಕರು ಮತ್ತು ಸಂಸದರ ನಡೆ ಖಂಡಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಂಕಷ್ಟ ಸೂತ್ರ ರೂಪಿಸಬೇಕು, ಸುಪ್ರೀಂ ಕೋರ್ಟ್‌ನಲ್ಲಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಎಂ.ಸಿ. ಲಂಕೇಶ್ ಮಂಗಲ, ಮಹದೇವಸ್ವಾಮಿ, ಜವರೇಗೌಡ, ಮಂಜು, ಪ್ರಸನ್ನ, ಉಮಾಪತಿ, ಜಗದೀಶ್ ಶಿವಲಿಂಗೇಗೌಡ, ಜಗದೀಶ್, ಸಂತೆಕಸಲಗೆರೆ ಚರಣ, ಸಚಿನ್ ಸಿದ್ದರಾಜು ಅರಕೆರೆ ಇತರರಿದ್ದರು.