ತಮಿಳುನಾಡಿಗೆ ನೀರು: ಪಟಾಪಟಿ ಚಡ್ಡಿ ಧರಿಸಿ ಪ್ರತಿಭಟನೆ

Advertisement

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ಮಂಡ್ಯದಲ್ಲಿ ಪಟಾಪಟಿ ಚಡ್ಡಿ ಮೆರವಣಿಗೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಪಟಾಪಟಿ ಚಡ್ಡಿ ಧರಿಸಿ ಖಾಲಿ ಬಿಂದಿಗೆ ಪ್ರದರ್ಶಿಸಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲೆಯ ಶಾಸಕ–ಸಂಸದರ ವಿರುದ್ಧ ಧಿಕ್ಕಾರ ಕೂಗುತ್ತಾ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಕಾವೇರಿ ಹೋರಾಟ ಬೆಂಬಲಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾವೇರಿ ಕಣಿವೆ ಜಿಲ್ಲೆಗಳ ರೈತರ ಹಿತ ಕಾಪಾಡಲು ಒತ್ತಾಯಿಸಿದರು. ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು, ಈಗಾಗಲೇ ನೆರೆ ರಾಜ್ಯಕ್ಕೆ ಕೆಆರ್‌ಎಸ್‌ನಲ್ಲಿದ್ದ ನೀರು ಹರಿದು ಹೋಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಮಂಡ್ಯ ಜಿಲ್ಲೆಗೆ 100 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, ನೀರು ಬರಿದು ಮಾಡಿ ರೈತರ ಬೆಳೆಗೆ ನೀರಿಲ್ಲದಂತೆ ಮಾಡಿರುವ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಮಹಾಂತಪ್ಪ ನಂದೀಶ್, ಮಂಜುನಾಥ್, ಗುತ್ತಲು ಚಂದ್ರು, ಜಯಮ್ಮ, ದರ್ಶನ್, ರಾಜೇಶ್, ನಂದೀಶ್ ನೇತೃತ್ವ ವಹಿಸಿದ್ದರು.