ನಾನು ಸಕ್ರಿಯ ರಾಜಕಾರಣಿ ರೆಡಿಮೇಡ್ ಫುಡ್ ಅಲ್ಲ

Advertisement

ದಾವಣಗೆರೆ: ನಾನು ರೈತಪರ ಹೋರಾಟ, ಕನ್ನಡಪರ ಹೋರಾಟ ಸೇರಿದಂತೆ ಅನೇಕ ಪ್ರತಿಭಟನೆ, ಚಳುವಳಿಯಲ್ಲಿ ಪಾಲ್ಗೊಂಡು ನೂರಾರು ಕೇಸುಗಳನ್ನು ಹಾಕಿಸಿಕೊಂಡಿರುವವನು, ನಾನು ಸಕ್ರಿಯ ರಾಜಕಾರಣದಲ್ಲಿರುವವನೇ ಹೊರತು ರೆಡಿಮೇಡ್ ಫುಡ್ ಅಲ್ಲ. ಹಾಗಾಗಿ, ನಿನ್ನೆ ಮೊನ್ನೆ ಬಂದು ನನ್ನ ವಿರುದ್ಧ ಮಾತಾಡುವವರಿಗೆ ನಾನು ಮಹತ್ವಕೊಡಬೇಕಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿಕೆ ಕುರಿತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ದಾವಣಗೆರೆಯ ತೊಗಟವೀರ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ೩೨ನೇ ವರ್ಷದ ಗಣೇಶೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ೧೯೯೦ರಿಂದ ನಾನು ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ. ಬಿಎಸ್‌ವೈ ನೂರಾರು ಕೇಸ್‌ಗಳನ್ನು ಹಾಕಿಸಿಕೊಂಡು ಜೈಲುವಾಸವನ್ನು ಅನುಭವಿಸಿದ್ದಾರೆ. ನಾನೂ ಕೂಡ ಅವರಂತೆ ಕ್ಷೇತ್ರದ ಜನತೆಗಾಗಿ ಮತ್ತು ಹಿಂದುತ್ವಕ್ಕಾಗಿ ಶಾಸಕನಾಗುವ ಮುನ್ನವೇ ನೂರಾರು ಕೇಸುಗಳನ್ನು ಹಾಕಿಸಿಕೊಂಡು ಜೈಲಿಗೆ ಹೋಗಿಬಂದವನು. ಆದ್ದರಿಂದ ನಾನು ರೆಡಿಮೇಡ್ ಫುಡ್ ಅಲ್ಲ ಎಂದು ಪುನರುಚ್ಛಿಸಿದರು.
ರಾಜಕಾರಣ ನಿಂತ ನೀರಲ್ಲ ಹರಿವ ನೀರು. ಸಂಘಟನೆ ಎಂದರೆ ಮನೆಯಲ್ಲಿ ಕೂತರೆ ಸಂಘಟನೆಯಾಗುವುದಿಲ್ಲ. ರಾಜ್ಯದ ತುಂಬೆಲ್ಲಾ ಸಂಚರಿಸಿ, ಜನರ ದುಃಖ ದುಮ್ಮಾನ ಕೇಳಿದರೆ ಸಂಘಟನೆಯಾಗುತ್ತದೆ. ನಾನು ಕೋವಿಡ್‌ನಲ್ಲಿ ಹೇಗೆ ಕೆಲಸ ಮಾಡಿದ್ದೇನೆಂದು ರಾಜ್ಯದ ಜನತೆಗೆ ಗೊತ್ತಿದೆ. ವಿದೇಶದಿಂದಲೂ ಕೂಡ ನನಗೆ ಕರೆ ಬರುತ್ತಿದ್ದವು. ಒಬ್ಬ ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿಯುತವಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದರು.
ಕಾಂಗ್ರೆಸ್‌ಗೆ ನಾನು ಹೋಗುತ್ತೇನೆ ಎಂದೂ ಎಲ್ಲೂ ಹೇಳಿಲ್ಲ. ರಾಜ್ಯಕ್ಕೆ ಬಿ.ಎಸ್. ಯಡಿಯೂರಪ್ಪ, ದೇಶಕ್ಕೆ ಮೋದಿ ಎನ್ನುವವನು ನಾನು. ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ ನಾಣು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ್ದೆ. ೨೦೧೧ರಲ್ಲಿಯೂ ಶಾಮನೂರು ಜತೆಗೆ ಫ್ಲೆöÊಟ್‌ನಲ್ಲಿ ಬಂದಿದ್ದೆ ಹಾಗಂತ ಕಾಂಗ್ರೆಸ್‌ಗೆ ಹೋಗಿದ್ದರು ಎಂದೂ ಯಾಕೆ ಹೇಳಲಿಲ್ಲ? ನಾನು ಬಿಜೆಪಿ ಕಟ್ಟಾಳು ಎಂದು ಎದೆಬಗೆದು ತೋರಿಸಬೇಕಾ ಎಂದು ಪ್ರಶ್ನಿಸಿದರು.
ನಾನು ಸಂಸದ ಸಿದ್ದೇಶ್ವರ್ ವಿರುದ್ಧ ಮಾತಾಡಿಲ್ಲ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೇನೆ ಹೊರತು ಹಾದಿಬೀದಿಯಲ್ಲಿ ಮಾತನಾಡಿಲ್ಲ. ರೇಣುಕಾಚಾರ್ಯ ಯಾರ ಹಿಡಿತದಲ್ಲಿಯೂ ಇಲ್ಲ. ನನ್ನನ್ನು ಯಡಿಯೂರಪ್ಪ ಬೆಳೆಸಿದ್ದು, ಹಾಗಾಗಿ ನನ್ನ ಶ್ರದ್ಧೆ ಯಡಿಯೂರಪ್ಪ ಮತ್ತು ಬಿಜೆಪಿಯ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು