ಆಡಳಿತ ಪಕ್ಷದಿಂದಲೇ ಮೇಯರ್ ವಿರುದ್ಧ ಪ್ರತಿಭಟನೆ

????????????????????????????????????
Advertisement

ಹುಬ್ಬಳ್ಳಿ: ತಮ್ಮ ಕೋರಿಕೆಯಂತೆ ಹೆಚ್ಚಿನ ವಿಷಯ ಕೈಗೆತ್ತಿಕೊಳ್ಳದೇ, ವಿಪಕ್ಷ ಮಾತಿಗೆ ಮಣೆ ಹಾಕಿದ ಮೇಯರ್ ವೀಣಾ ಭಾರದ್ವಾಡ ವಿರುದ್ಧ ಆಡಳಿತಾರೂಢ ಬಿಜೆಪಿ ಕಾರ್ಪೋರೇಟರ್‌ಗಳು ಪ್ರತಿಭಟನೆ ನಡೆಸಿದ ಪ್ರಸಂಗ ಶನಿವಾರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆಯಿತು. ಪರಿಣಾಮವಾಗಿ, ಯಾವುದೇ ಕಲಾಪ ನಡೆಸದೇ ಸಭೆ ಮುಂದೂಡಲ್ಪಟ್ಟಿತು.
ತಾಂತ್ರಿಕ ಸಣ್ಣ ಕಾರಣವೊಂದನ್ನು ಮುಂದಿಟ್ಟುಕೊಂಡು ವಿಪಕ್ಷ ಕಾಂಗ್ರೆಸ್ ಪ್ರಶ್ನೆ ಎತ್ತಿದ್ದೇ ಇದಕ್ಕೆ ಮೂಲ ಕಾರಣ.
ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೇ, ವಿಷಯ ಪಟ್ಟಿಯಲ್ಲಿ (ಅಜೆಂಡಾ) ಇಲ್ಲದ ಹೆಚ್ಚಿನ ವಿಷಯಗಳನ್ನು ಪರಿಷತ್ ಕಾರ್ಯದರ್ಶಿ ಕೈಗೆತ್ತಿಕೊಂಡರು. ಕಾಂಗ್ರೆಸ್ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿತು. `ವಿಷಯ ಪಟ್ಟಿಯಲ್ಲಿನ ಅಂಶಗಳು ಮಾತ್ರ ಚರ್ಚೆಗೆ ಬರಬೇಕು. ಹೆಚ್ಚಿನ ವಿಷಯಗಳ ಬಗ್ಗೆ ಮುಂಚಿತವಾಗಿ ನೊಟೀಸ್ ನೀಡಬೇಕು’ ಎಂಬುದಾಗಿ ಪ್ರತಿಪಕ್ಷ ನಾಯಕಿ ಸುವರ್ಣ ಜಾನ್ಸನ್ ಕಲ್ಲಕುಂಟ್ಲ ತಕರಾರು ತೆಗೆದರು. ವಿಪಕ್ಷದ ಉಳಿದ ಸದಸ್ಯರು ಬೆಂಬಲಿಸಿದರು.
ಬಿಜೆಪಿ ಕಾರ್ಪೋರೇಟರ್‌ಗಳು ಕಾಂಗ್ರೆಸ್ ವಾದಕ್ಕೆ ಆಕ್ಷೇಪಿಸಿ, ಹೆಚ್ಚಿನ ವಿಷಯಗಳನ್ನು ಮೇಯರ್ ಅನುಮತಿಯೊಂದಿಗೆ ಕೈಗೆತ್ತಿಕೊಳ್ಳಬಹುದು ಎಂದು ಪ್ರತಿಪಾದಿಸಿದರು. ಈ ಹಂತದಲ್ಲಿ ಎರಡೂ ಕಡೆಯವರ ನಡುವೆ ಇನ್ನಿಲ್ಲದ ವಾಗ್ವಾದ ನಡೆದು ತೀವ್ರ ಗದ್ದಲದ ವಾತಾವರಣ ಉಂಟಾಯಿತು.