ಹಿರಿಯ ನಾಗರಿಕರಿಗಾಗಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ

Advertisement

ಬೆಂಗಳೂರು: ಹಿರಿಯ ನಾಗರಿಕರಿಗಾಗಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ವಿಶ್ವ ಮಾನವರಾಗಿಯೇ ಇಹಲೋಕ ತ್ಯಜಿಸಬೇಕು. ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವು ನೀವೆಲ್ಲಾ ಎಷ್ಟು ವರ್ಷ ಬದುಕುತ್ತೀವಿ ಎನ್ನುವುದಕ್ಕಿಂತ ಇದ್ದಷ್ಟು ದಿನ ಸಾರ್ಥಕ ಬದುಕು ನಡೆಸುವುದು ಉತ್ತಮ.
ಹಿರಿಯ ನಾಗರಿಕರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಡಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು ಎನ್ನುವುದು ನಮ್ಮ ಉದ್ದೇಶ. ಶೀಘ್ರದಲ್ಲೇ ಈ ಕುರಿತು ಯೋಜನೆ ಜಾರಿಗೊಳಿಸಲಾಗುವುದು. ತಂದೆ- ತಾಯಿ, ಹಿರಿಯರು ನಮಗೆ ಕಣ್ಣಿಗೆ ಕಾಣುವ ದೇವರು. ಹಿರಿಯ ನಾಗರಿಕರ ಯೋಗಕ್ಷೇಮ ಕೇಂದ್ರದಲ್ಲಿ ಅನೇಕ ನೂನ್ಯತೆಗಳಿವೆ. ಅವುಗಳಿಗೆ ಆದಷ್ಟು ಬೇಗ ಪರಿಹಾರ ನೀಡಲಾಗುವುದು. ಹಿರಿಯರನ್ನು ಸಾಕುವ ಜವಾಬ್ದಾರಿ ನಮ್ಮದು. ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದೆ‌‌. ಹಿರಿಯ ಜೀವಗಳ ಮನಸ್ಸನ್ನು ನೋಯಿಸದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಈ ದೇಶ ರಾಮನ ದೇಶ, ಶ್ರವಣಕುಮಾರನ ದೇಶ, ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಯುವ ಜನತೆ ಬೆಳೆಯಬೇಕು. ನಮ್ಮ ಸಂಸ್ಕೃತಿಯನ್ನು ಮರೆಯದೇ ಮುನ್ನಡೆಯಬೇಕು. ಅಲ್ಲದೆ, ತಂದೆ ತಾಯಿಗೆ ಯಾರು ಗೌರವ ಕೊಡುತ್ತಾರೊ ಅಂತಹವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದಿದ್ದಾರೆ.