ಚಿಕ್ಕ ಮಗಳ ಊರು ಚಿಕ್ಕಮಗಳೂರು

Advertisement

ರಾಜ್ಯದ ಹೆಸರಾಂತ ಪ್ರವಾಸಿ ತಾಣವಾದ ಚಿಕ್ಕಮಗಳೂರು ಇಡೀ ರಾಜ್ಯಕ್ಕೆ ಕಿರೀಟಪ್ರಾಯವೆಂದೇ ಹೇಳಬೇಕು. ಒಂದೆಡೆ ಸಸ್ಯವನದ ಹಸಿರು ಸಿರಿ. ಇನ್ನೊಂದೆಡೆ ಗಿರಿಕಂದರಗಳು, ಝರಿ-ತೊರೆಗಳ ವೈಭವ. ಪ್ರಕೃತಿ ಮಾತೆಯೇ ಇಲ್ಲಿ ಸಾಕಾರಗೊಂಡಿದ್ದಾಳೆ. ಪಶ್ಚಿಮಘಟ್ಟ ಪರ್ವತ ಶ್ರೇಣಿಯಲ್ಲಿ ಬರುವ ರಾಜ್ಯದಲ್ಲೇ ಅತ್ಯಂತ ಎತ್ತರದ ಅಂದರೆ ೧೯೩೦ ಮೀಟರ್ (೬೩೩೦ ಅಡಿ) ಎತ್ತರವನ್ನು ಹೊಂದಿರುವ ಮುಳ್ಳಯ್ಯನಗಿರಿ ಹಾಗೂ ಚಂದ್ರದ್ರೋಣ ಪರ್ವತ ಸಾಲು ಇಲ್ಲಿನ ಹಿರಿಮೆ.

ಎನ್.ಪ್ರವೀಣ್
ಐತಿಹಾಸಿಕವಾಗಿ ಊರಿನ ಹೆಸರನ್ನು ಕೆದಕುತ್ತಾ ಹೋದಾಗ ಶಾಸನಗಳು ಹೇಳುವುದೇ ಬೇರೆ. ಶಾಸನ ತಜ್ಞರು ಹುಡುಕಿರುವ ಹತ್ತು ಶಾಸನಗಳಲ್ಲಿ ಅಂದರೆ ಕ್ರಿ.ಶ. ೮೯೯, ೯೦೦, ೧೦೬೧, ೧೦೭೪, ೧೧೪೦, ೧೧೮೪, ೧೨೫೭, ೧೨೮೭, ೧೫೮೬ ಹಾಗೂ ೧೨೩೦ರ ಶಾಸನಗಳಲ್ಲಿ ಮೊದಲು ಕಿರಿಯ ಮುಗಳಿ ಮತ್ತು ಪಿರಿಯ ಮುಗಳಿ ಎಂದು ಆರಂಭವಾಗಿ ಅನಂತರ ಅದು ಚಿಕ್ಕಮುಗಳಿ ಮತ್ತು ಹಿರೇಮುಗಳಿ ಎಂದು ಬದಲಾಗಿ ಕಾಲಾಂತರದಲ್ಲಿ ಅದು ಹಿರೇಮಗಳೂರು ಮತ್ತು ಚಿಕ್ಕಮಗಳೂರು ಎಂದಾಗಿದೆ ಎನ್ನುತ್ತವೆ. ಈ ಹೆಸರು ಬರಲು ಶಾಸನ ತಜ್ಞರು ಹೇಳುವುದು ಈ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಮುಗಳಿ ಎಂಬ ಸಸ್ಯ. ಮುಳ್ಳಿನಿಂದ ಕೂಡಿದ ಈ ಮುಗಳಿ ಸಣ್ಣ ಮರವನ್ನು ಸಸ್ಯಶಾ‌ಸ್ತ್ರೀಯವಾಗಿ ಅಕೇಷಿಯಾ ಸುಮಾ ಎಂದು ಗುರುತಿಸಲಾಗಿದೆ. ಹಾಗಾಗಿ ಪಶ್ಚಿಮಘಟ್ಟದ ಅಂಚಿನಲ್ಲಿರುವ ಚಿಕ್ಕಮಗಳೂರು ತನ್ನ ಹೆಸರನ್ನು ಸಸ್ಯದ ಹಿನ್ನೆಲೆಯಲ್ಲೇ ಪಡೆದಿದೆ.
ಆಧಾರವಿಲ್ಲದ ಐತಿಹ್ಯ: ಅಧ್ಯಾತ್ಮ, ಉತ್ತಮ ಸಾಂಸ್ಕೃತಿಕ ಪರಂಪರೆ ಹೊಂದಿರುವ ಈ ನಾಡಿಗೆ ಚಿಕ್ಕಮಗಳೂರು ಎಂದು ಹೆಸರು ಬರಲು ಐತಿಹ್ಯವೊಂದಿದೆ. ಹಿಂದೆ ಸಖರಾಯಪಟ್ಟಣವನ್ನು ಆಳುತ್ತಿದ್ದ ರುಕ್ಮಾಂಗದನೆಂಬ ತನ್ನ ಇಬ್ಬರು ಪುತ್ರಿಯರನ್ನು ವಿವಾಹ ಮಾಡಿಕೊಡುವ ಸಂದರ್ಭ ಹಿರಿಯ ಮಗಳಿಗೂ ಕಿರಿಯ ಮಗಳಿಗೂ ಉಭಯ ಊರುಗಳನ್ನು ಬಳುವಳಿಯಾಗಿ ನೀಡಿದ್ದನಂತೆ. ಅದೇ ಮುಂದೆ ಹಿರಿಯ ಮಗಳ ಊರು' ಹಿರೇಮಗಳೂರು ಎಂದೂ,ಚಿಕ್ಕ ಮಗಳ ಊರು’ ಚಿಕ್ಕಮಗಳೂರು ಆಯಿತೆಂದು ಪ್ರತೀತಿ. ಆದರೆ ಇದಕ್ಕೆ ಯಾವುದೇ ಶಾಸನಗಳ ಆಧಾರವಿಲ್ಲ ಎನ್ನುವುದು ಗಮನಾರ್ಹ.
ಕಾಫಿನಾಡಾಗಿದ್ದು ಹೀಗೆ: ಕಾಫಿಗೆ ಹೆಸರುವಾಸಿಯಾಗಿರುವ ಈ ನಾಡಿನ ಜನರು ಕಾಫಿ ಕೃಷಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವರು. ೧೭ನೇ ಶತಮಾನದಲ್ಲಿ ಬಾಬಾ ಬುಡನ್ ಎಂಬ ಮುಸ್ಲಿಂ ಸಂತ ಮೆಕ್ಕಾದಿಂದ ಮರಳುವ ಸಂದರ್ಭ ಏಳು ಕಾಫಿ ಬೀಜಗಳನ್ನು ಇಲ್ಲಿ ಬಿತ್ತಿದನೆಂದೂ, ಅದು ಮೊಳಕೆಯೊಡೆದು ಸಸಿಯಾಗಿ ಬೆಳೆದು ಮುಂದೆ ಕಾಫಿನಾಡಾಗಿ ಬೆಳೆಯಿತು. ಇಂದು ಬಹುತೇಕರು ಕಾಫಿ ಬೆಳೆಗಾರರಾಗಿ ಗುರುತಿಸಿಕೊಂಡಿದ್ದು, ರಾಜ್ಯದಲ್ಲಷ್ಟೇ ಏಕೆ ಭಾರತದಲ್ಲೇ ಕಾಫಿ ಬೆಳೆಯುವಲ್ಲಿ ಚಿಕ್ಕಮಗಳೂರು ಅಗ್ರಸ್ಥಾನದಲ್ಲಿದೆ.
ಈ ಊರು ಅನೇಕ ದೇವಾಲಯಗಳಿಗೆ ನೆಲೆಯಾಗಿದೆ. ಹಿರೇಮಗಳೂರಿನಲ್ಲಿರುವ ಕೋದಂಡರಾಮಚಂದ್ರ ಸ್ವಾಮಿ ದೇವಾಲಯ ಅತ್ಯಂತ ಪುರಾತನವಾದದ್ದು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಕನ್ನಡದಲ್ಲೇ ಅರ್ಚನೆ ನಡೆಯುತ್ತಿರುವುದು ಇಲ್ಲಿನ ವಿಶೇಷ. ದತ್ತಪೀಠ, ವೀರನಾರಾಯಣ ದೇವಾಲಯಗಳು ಕೂಡ ಗಮನಾರ್ಹ ಅಧ್ಯಾತ್ಮದ ಕೇಂದ್ರಗಳೇ ಆಗಿವೆ.

ನೀವೂ ಬರೆಯಬಹುದು. ಲೇಖನಗಳನ್ನು email id: sknammuru@gmail.com ಗೆ ಕಳಿಸಿ.

ನಾಳೆ: ಮೈಸೂರು