ಮತ್ತೊಂದು ವಂಚನೆ ಪ್ರಕರಣ: ಹಿರೇಹಡಗಲಿ ಮಠದಲ್ಲಿ ಹಾಲಶ್ರೀ ಮಹಜರು

Advertisement

ಹೂವಿನಹಡಗಲಿ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಮತ್ತೊಂದು ಪ್ರಕರಣದಲ್ಲಿ ಆರೋಪಿಯಾಗಿರುವ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಮುಂಡರಗಿ ಪೊಲೀಸರು ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠಕ್ಕೆ ಬುಧವಾರ ಕರೆತಂದು ವಿಚಾರಣೆ ನಡೆಸಿದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ಹಾಲಶ್ರೀ 1 ಕೋಟಿ ರೂ.ಗಳನ್ನು ಮೂರು ಕಂತುಗಳಲ್ಲಿ ಪಡೆದು ವಂಚಿಸಿದ್ದಾರೆ ಎಂದು ಶಿರಹಟ್ಟಿ ತಾಲೂಕು ಹೆಬ್ಬಾಳ ಗ್ರಾಮದ ಸಂಜಯ ಚವಡಾಳ ಎಂಬುವವರು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಲು ಮುಂಡರಗಿ ಸಿಪಿಐ ಮಂಜುನಾಥ ಕುಸಗಲ್ ನೇತೃತ್ವದ ಪೊಲೀಸ್ ತಂಡ ಸ್ವಾಮೀಜಿಯನ್ನು ಮಠಕ್ಕೆ ಕರೆತಂದಿದ್ದರು.
ಗದಗ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ವಾಹನದಲ್ಲಿ ಸ್ವಾಮೀಜಿಯನ್ನು ಮುಂಡರಗಿಯಿಂದ ಕರೆತರಲಾಗಿತ್ತು. ಹಾಲಸ್ವಾಮಿ ಮಠ ಮತ್ತು ಮಠದ ಬಳಿ ಇರುವ ಸ್ವಾಮೀಜಿ ಮನೆಗೆ ಅವರನ್ನು ಕರೆದೊಯ್ದು ಮಹಜರು ನಡೆಸಲಾಯಿತು. ಮಠದಲ್ಲಿ 45 ನಿಮಿಷ ವಿಚಾರಣೆ ನಡೆಸಿ ಬಳಿಕ ಅದೇ ವಾಹನದಲ್ಲಿ ಮುಂಡರಗಿಗೆ ಕರೆದೊಯ್ಯಲಾಯಿತು. ವಿಚಾರಣೆ ವೇಳೆ ಮಠಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸ್ವಾಮೀಜಿ ನೋಡಲು ಮಠದ ಮುಂದೆ ಸ್ಥಳೀಯರು ನೆರೆದಿದ್ದರು.