ಪದವಿ ಜೊತೆ ತಳಿ ಅಭಿವೃದ್ಧಿ ಮುಖ್ಯ

Advertisement

ಬೆಂಗಳೂರು: ಪದವಿ ಜೊತೆ ತಳಿ ಅಭಿವೃದ್ದಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಶತಮಾನೋತ್ಸವ ಮತ್ತು ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿರುವ ಅವರು ಸಂಶೋಧನೆಗಳಿಗೆ ಸಕಲ ನೆರವು ನೀಡಲು ಸರ್ಕಾರ ಸಿದ್ಧವಾಗಿದೆ ಮತ್ತು ಬದ್ಧವಾಗಿದೆ. ಎಷ್ಟು ತಳಿ, ಎಷ್ಟು ರೋಗಕ್ಕೆ ಔಷಧ ಕಂಡು ಹಿಡಿದಿದ್ದೀರಿ, ಎಷ್ಟು ರೋಗನಿರೋಧಕ ಔಷಧಗಳನ್ನು ಕಂಡು ಹಿಡಿದಿದ್ದೀರಿ ಎನ್ನುವುದು ನಿಮ್ಮ ಆದ್ಯತೆಯಾಗಬೇಕು.
ಬೆಳೆದ ಬೆಳೆಗೆ ಬೆಲೆ ಇಲ್ಲ. ಅತಿವೃಷ್ಟಿ, ಅನಾವೃಷ್ಠಿ, ಬರಗಾಲ ರೈತರನ್ನು ಕಾಡುತ್ತಿದೆ. ಹೀಗಾಗಿ ಬದಲಾದ ವಾತಾವರಣಕ್ಕೆ ತಕ್ಕಂತೆ ರೈತ ಪರವಾದ ಸಂಶೋದನೆಗಳು ನಡೆಯಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದಲ್ಲಿ 80 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿದ್ದರೆ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೀಗಾಗಿ ರಾಜ್ಯ ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೂ.4,860 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ನಾವು ಮನವಿ ಮಾಡಿದ್ದೇವೆ. ನಮಗೆ ಆಗಿರುವ ನಷ್ಟದ ಪ್ರಮಾಣ 30 ಸಾವಿರ ಕೋಟಿಗೂ ಅಧಿಕ. ಇದನ್ನೆಲ್ಲಾ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ.
ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ. ಈಗ ಇನ್ನಷ್ಟು ಬರಗಾಲಕ್ಕೆ ತುತ್ತಾಗಿದೆ. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ನೀಡಲಿ. ನಮ್ಮ ಸರ್ಕಾರ ಮಾತ್ರ ಜನರಿಗೆ, ರೈತರಿಗೆ, ಗೋವುಗಳಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು ಬದ್ಧವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಚಿತ್ರದುರ್ಗ ಜಿಲ್ಲೆಗೆ ಕೃಷಿ ಮತ್ತು ಕುಡಿಯುವ ನೀರಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ. ನೀರಾವರಿ, ಕೃಷಿಗೆ ಹೆಚ್ಚಿನ ಅನುದಾನ ನೀಡುತ್ತೇವೆ. ರೈತ ಸಮುದಾಯದ ಜತೆ ನಾವು ಗಟ್ಟಿಯಾಗಿ ನಿಂತಿದ್ದೇವೆ.
ಕೃಷಿ, ತೋಟಗಾರಿಕಾ ವಿ.ವಿ ಗಳಲ್ಲಿ ಸಂಶೋಧನೆಗಳು ಹೆಚ್ಚೆಚ್ಚು ಆಗಬೇಕು. ಹವಾಮಾನ ಬದಲಾವಣೆಯಲ್ಲಿ ಯಾವ ಬೆಳೆಗೆ ಹೆಚ್ಚು ಮಹತ್ವವಿದೆ, ರೈತರಿಗೆ ಯಾವ ಬೆಳೆಯಿಂದ ಅನುಕೂಲವಾಗಲಿದೆ ಎನ್ನುವುದರ ಕುರಿತು ಅಧ್ಯಯನ ನಡೆಸಬೇಕು. ಕೃಷಿ ವಿ.ವಿ ಗಳಿಂದ ಎಷ್ಟು ಪದವೀಧರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದರು.