ಬಾಲಕಿ ವಿದ್ಯಾಭ್ಯಾಸಕ್ಕೆ ನೆರವಾದ ಕೆ.ಎಲ್. ರಾಹುಲ್

Advertisement

ಹುಬ್ಬಳ್ಳಿ: ಅದು ಸುಡುಗಾಡು ಸಿದ್ದರ ಕುಟುಂಬ. ಅಲೇಮಾರಿ ಜೀವನ ನಡೆಸುತ್ತ ಬದುಕು ನಡೆಸುವುದು ಅವರ ವೃತ್ತಿ. ಇಂತಹ ಬಡಕುಟುಂಬದಲ್ಲಿ ಜನಿಸಿದ ಬಾಲಕಿಯೊಬ್ಬಳಿಗೆ ಭವಿಷ್ಯದಲ್ಲಿ ವೈದ್ಯಳಾಗಬೇಕು ಎಂಬ ಹಂಬಲ. ಆ ಹಂಬಲಕ್ಕೆ ಅಡ್ಡಿಯಾದ ಬಡತನವನ್ನು ಬದಿಗೊತ್ತಿ ಬಾಲಕಿಯ ಪ್ರಾಥಮಿಕ ಶಿಕ್ಷಣಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭದ್ರ ಬುನಾದಿ ಹಾಕಿದ್ದಾರೆ.
ಕರ್ನಾಟಕ ಕ್ರಿಕೆಟ್ ರಂಗದಿಂದ ಬೆಳೆದು ಇಂದು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ಸಾಕಷ್ಟು ಜನ ಅಭಿಮಾನಿಗಳನ್ನು ಹೊಂದಿರುವ ಕೆ.ಎಲ್. ರಾಹುಲ್, ಸೃಷ್ಟಿ ಕುಲಾವಿ ಎಂಬ ಬಾಲಕಿಗೆ ಆರ್ಥಿಕ ನೆರವು ನೀಡುವ ಮೂಲಕ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಧಾರವಾಡದ ಸಿದ್ಧೇಶ್ವರ ಕಾಲೋನಿಯ ನಿವಾಸಿ ಹನುಮಂತಪ್ಪ ಹಾಗೂ ಸುಮಿತ್ರಾ ದಂಪತಿಯ ಮಗಳು ಸೃಷ್ಟಿಗೆ ಭವಿಷ್ಯದಲ್ಲಿ ಡಾಕ್ಟರ್ ಆಗುವ ಕನಸು. ಆದರೆ, ಬಡತನ ಶಾಪವಾಗಿತ್ತು. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಬಾಲಕಿಯ ಓದಿನ ಹಂಬಲ ಕಂಡ ಸ್ಥಳೀಯ ಸಮಾಜಸೇವಕ ಮಂಜುನಾಥ ಹೆಬಸೂರ ಅವರು ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರನ್ನು ಸಂಪರ್ಕಿಸಿ, ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿಸಿದ್ದಾರೆ.
ಧಾರವಾಡದ `ದಿ ಗ್ಲೋಬಲ್ ಎಕ್ಸಲೆನ್ಸ್ ಶಾಲೆ’ಯಲ್ಲಿ ಸೃಷ್ಟಿ ಕುಲಾವಿ ವ್ಯಾಸಂಗ ಮಾಡಲು ಕೆ.ಎಲ್. ರಾಹುಲ್ ಅವರು ನೆರವು ನೀಡಿದ್ದಾರೆ. ಸದಾಕಾಲ ಕ್ರಿಕೆಟ್‌ನಲ್ಲಿ ಬ್ಯೂಸಿ ಇರುವ ಕೆ.ಎಲ್. ರಾಹುಲ್, ಪ್ರತಿಭಾವಂತರ ಓದಿಗೆ 21 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಿ ಬಾಲಕಿಯ 1ನೇ ತರಗತಿಗೆ ಅಡ್ಮಿಷನ್ ಮಾಡಿಸಿದ್ದಾರೆ.
ಕೆ.ಎಲ್. ರಾಹುಲ್‌ ಅವರ ಜೊತೆಗೆ ಪ್ರತಿಭಾವಂತರ ನೆರವಿಗೆ ಹುಬ್ಬಳ್ಳಿಯ ಮಂಜುನಾಥ ಸಾಕಷ್ಟು ಶ್ರಮವಹಿಸಿದ್ದಾರೆ. ಕೆ.ಎಲ್. ರಾಹುಲ್ ಮೂಲಕ ಬಡ ಪ್ರತಿಭೆಗಳ ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಅದೆಷ್ಟೋ ಪ್ರತಿಭೆಗಳು ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗದೇ ಪರದಾಡುತ್ತಿವೆ. ಈ ಬಗ್ಗೆ ಉಳ್ಳವರು ಬಡ ಪ್ರತಿಭೆಗಳ ಬಗ್ಗೆ ಕಾಳಜಿ ವಹಿಸಲು ಮುಂದಾಗಬೇಕಿದೆ.