ಭಕ್ತಿ ಮತ್ತು ವೈಚಾರಿಕತೆ

Advertisement

ವೈಚಾರಿಕತೆ ಮತ್ತು ಭಕ್ತಿ ಇವೆರಡರಲ್ಲಿ ಯಾವುದು ಮೇಲು ? ವೈಚಾರಿಕತೆಯ ಜೊತೆಗೆ ವೈಜ್ಞಾನಿಕತೆ ಸೇರಿಕೊಳ್ಳುತ್ತದೆ. ಭಕ್ತಿಯ ಜೊತೆ ನಂಬಿಕೆ, ಶ್ರದ್ಧೆಗಳು ಸೇರಿಕೊಳ್ಳುತ್ತವೆ. ಸಮಾಜದಲ್ಲಿ ವೈಚಾರಿಕತೆ ಮೇಲು ಎಂಬ ಭಾವನೆ ಅನೇಕ ಸಲ ಕಂಡುಬರುತ್ತದೆ. ವಿಶೇಷವಾಗಿ ಶೈಕ್ಷಣಿಕ ವಲಯದಲ್ಲಿ ವೈಚಾರಿಕತೆಯ ಪ್ರಾಧಾನ್ಯ ಎದ್ದು ಕಾಣುತ್ತದೆ. ಆದರೆ ನನ್ನ ನನ್ನಂಥವರ ದೃಷ್ಟಿಯಿಂದ ಭಕ್ತಿಯೇ ಮೇಲು. ಹೀಗೆ ಹೇಳಲು ಕಾರಣಗಳಿವೆ.
ವೈಚಾರಿಕತೆಗೆ ಪರಿಮಿತಿ ಇದೆ. ಮೇಲ್ನೋಟಕ್ಕೆ ಭಕ್ತಿಗೆ ಪರಿಮಿತಿ ಇರುವುದು ಕಂಡುಬರುತ್ತದೆ. ಆದರೆ ಭಕ್ತನು ದೇವರ ಬಳಿ ಭಕ್ತಿಸಾರುವ ಮೂಲಕ ಅದ್ಭುತವಾದ ಅರಿವನ್ನು ಪಡೆಯುತ್ತಾನೆ. ಆ ಅರಿವನ್ನು ವೈಚಾರಿಕತೆಯಿಂದ ಬೆಳೆಸಲು ಸಾಧ್ಯವಿಲ್ಲ. ವೈಚಾರಿಕತೆಯಲ್ಲಿ ಆಗುವ ಬುದ್ಧಿಯ ವಿಕಾಸ ಮನುಷ್ಯಸಾಮರ್ಥ್ಯಕ್ಕೆ ಸೀಮಿತವಾದದ್ದು. ಭಕ್ತಿಯಲ್ಲಿ ಬುದ್ಧಿಯ ಆಚೆಯಿರುವ ಭಗವಂತನ ಪ್ರೇರಣೆ ದೊರಕುವದರಿಂದ ಬುದ್ಧಿಯ ವಿಕಾಸವು ಹೆಚ್ಚಿಗೆ ಇದೆ.
ವೈಚಾರಿಕತೆಯಲ್ಲಿ ಕುಟಿಲತೆ ಮತ್ತು ಅಹಂಕಾರ ಹುಟ್ಟಿಕೊಳ್ಳುವ ಸಂಭವ ತುಂಬಾ ಇದೆ. ಭಕ್ತಿಗೆ ಇವೆರಡೂ ತುಂಬಾ ದೂರ. ಭಕ್ತಿಯ ಬೆಳವಣಿಗೆಯ ಆರಂಭದಲ್ಲಿ ಕುಟಿಲತೆ-ಅಹಂಕಾರಗಳಿರಬಹುದು. ಭಕ್ತಿಯು ಬೆಳೆದಂತೆ ಇವೆರಡೂ ನಾಶವಾಗಿ ಹೋಗುತ್ತವೆ. ವೈಚಾರಿಕತೆಯೊಂದನ್ನೇ ಕೂಡಿಸಿಕೊಂಡಾಗ ಜೀವನದ ಕೊನೇಯ ಭಾಗ ವೃದ್ಧಾಪ್ಯ ಬಂದಾಗ ಕಂಗಾಲಾಗುತ್ತಾರೆ. ಪರಿಪಕ್ವ ಭಕ್ತಿಯುಳ್ಳವನು ಮರಣವೇ ಬಂದರೂ ವಿಚಲಿತನಾಗುವುದಿಲ್ಲ. ವೃದ್ಧಾಪ್ಯದಲ್ಲಾಗುವ ಚಿಂತೆ, ಕ್ರೋಧ, ಭಯಗಳ ಚಡಪಡಿಕೆಗಳನ್ನು ನಿಯಂತ್ರಿಸಿಕೊಳ್ಳಲು ಭಕ್ತಿಯೇ ಬೇಕು.
ಭಕ್ತಿ ಮತ್ತು ವೈಚಾರಿಕತೆಗಳು ವಿರುದ್ಧವಾದವುಗಳಲ್ಲ. ಅವು ಒಟ್ಟಿಗೆ ಒಂದು ವ್ಯಕ್ತಿಯಲ್ಲಿ ಇರಬಲ್ಲವು. ಸೂಕ್ತ ಮಾರ್ಗದರ್ಶನದೊಂದಿಗೆ ಚಿಕ್ಕ ವಯಸ್ಸಿನಿಂದಲೇ ಎರಡೂ ಬೆಳೆಸಿಕೊಳ್ಳುತ್ತಾ ಹೋದರೆ ಪರಸ್ಪರ ಪುಷ್ಟಿಗೊಂಡು ಅವೆರಡೂ ಬಲಿಷ್ಠವಾಗುತ್ತವೆ. ಆದ್ದರಿಂದ ಪಠ್ಯ-ಪುಸ್ತಕಗಳಲ್ಲಿ, ಶಾಲೆಗಳಲ್ಲಿ ವೈಚಾರಿಕತೆಯೊಂದೇ ಇದ್ದರೆ ಸಾಲದು, ಮುಂದೆ ಭಕ್ತಿ ಭಾವವನ್ನು ಬೆಳೆಸುವ ನಂಬಿಕೆಗಳು ಜೊತೆಯಲ್ಲಿರಬೇಕು.