ಇಟಲಿ ಶಿಲೆಯಲ್ಲಿ ರೂಪಗೊಂಡ ಸಾಯಿ ಬಾಬಾ ನೂತನ ವಿಗ್ರಹ

Advertisement

ಹುಬ್ಬಳ್ಳಿ: ಶಿರಡಿ ಮಾದರಿಯಲ್ಲಿ ಹುಬ್ಬಳ್ಳಿ ಹಳೇ ಕೋರ್ಟ್ ಹತ್ತಿರದ ಶಿರಡಿ ಸಾಯಿ ಮಂದಿರ ಜೀರ್ಣೋದ್ಧಾರಗೊಂಡಿದ್ದು, ಇಟಲಿ ರಾಷ್ಟ್ರದ ಶಿಲೆಯಲ್ಲಿ ವಿಶೇಷವಾಗಿ ರೂಪಗೊಂಡ ಸಾಯಿಬಾಬಾ ವಿಗ್ರಹದ ಪ್ರತಿಷ್ಠಾಪನೆ ಮತ್ತು ಸಾಯಿ ಬಾಬಾ ಅವರ ೧೦೫ನೇ ಸಮಾಧಿ ಉತ್ಸವ ಕಾರ್ಯಕ್ರಮ ಅ.೧೭ ರಿಂದ ೨೫ ರವರೆಗೆ ಜರುಗಲಿದೆ ಎಂದು ಶಿರಡಿ ಸಾಯಿ ಸದ್ಭಕ್ತ ಮಂಡಳಿ ಅಧ್ಯಕ್ಷ ಮಹದೇವ ಮಾಶ್ಯಾಳ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಡಿಯಲ್ಲಿರುವಂತೆ ಗರ್ಭಗುಡಿ, ಗೋಪುರ ನಿರ್ಮಿಸಲಾಗಿದೆ. ಅಲ್ಲದೇ, ಇಟಲಿಯಿಂದ ಶಿಲೆಯನ್ನು ತಂದು ಜೈಪುರದ ಕಲಾವಿದ ಸೂರಜ್ ಅವರು ಸಾಯಿ ಬಾಬಾ ಮೂರ್ತಿ ರೂಪಿಸಿದ್ದಾರೆ. ಮೂರ್ತಿಯೂ ೨೫೦೦ ಕೆಜಿ ಇದ್ದು, ೨೫ ಲಕ್ಷ ರೂ. ವೆಚ್ಚದಲ್ಲಿ ಮೂರ್ತಿ ತಯಾರಿಸಲಾಗಿದೆ ಎಂದರು.
ಅ.೧೭ ರಂದು ಸಂಜೆ ೭ಕ್ಕೆ ಸಾಯಿ ಸಮಾಧಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉದ್ಯಮಿ ಸೋಮಶೇಖರ ಹತ್ತಿ ಅತಿಥಿಗಳಾಗಿ ಆಗಮಿಸುವರು. ಅ.೧೮ ರಂದು ಬೆಳಿಗ್ಗೆ ೬ಕ್ಕೆ ಸಾಯಿ ಸಚ್ಚರಿತ್ರೆ ಪಾರಾಯಣ ಪಠಣ ಉದ್ಘಾಟನಾ ಸಮಾರಂಭ ನಡೆಯಲಿದ್ದು, ವಾಣಿ ರಾಜೇಂದ್ರ ಹೂಗಾರ ಚಾಲನೆ ನೀಡುವರು. ಬೆಳಿಗ್ಗೆ ೭.೩೦ಕ್ಕೆ ಕಲಾಕರ್ಷಣ ಮತ್ತು ಜೀರ್ಣ ಮೂರ್ತಿ ಸಮಾಧಿ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಅ.೧೯ ರಂದು ಬೆಳಿಗ್ಗೆ ೧೦ಕ್ಕೆ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದ್ದು, ಧಾರವಾಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ರಂಜನಾ ಪೋಳ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವರು. ಅ.೨೦ ರಂದು ಬೆಳಿಗ್ಗೆ ೮ಕ್ಕೆ ಕುಂಭ ಮೇಳ ಮತ್ತು ನೂತನ ಸಾಯಿ ಬಾಬಾ ಮೂರ್ತಿ ಮೆರವಣಿಗೆ ನಡೆಯಲಿದ್ದು, ಉದ್ಯಮಿ ಪ್ರಕಾಶ ಬಾಫಣಾ ಮೂರ್ತಿ ಮೆರವಣಿಗೆಗೆ ಚಾಲನೆ ನೀಡುವರು. ಅತಿಥಿಯಾಗಿ ಡಾ. ಶೋಭಾ ಬೆಂಬಳಗಿ ಪಾಲ್ಗೊಳ್ಳುವರು. ಅ. ೨೧ರಂದು ಬೆಳಿಗ್ಗೆ ೯ಕ್ಕೆ ವಿವಿಧ ಹೋಮ ಮತ್ತು ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಅ.೨೨ ರಂದು ಬೆಳಿಗ್ಗೆ ೭ಕ್ಕೆ ಶಿರಡಿ ಮಾದರಿಯಲ್ಲಿ ಜೀರ್ಣೊದ್ಧಾರಗೊಂಡ ಗರ್ಭಗುಡಿ ಉದ್ಘಾಟನೆ, ಕಳಾಸರೋಹಣ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಹುಬ್ಬಳ್ಳಿ ಪದ್ಮರಾಜನಗರದ ಅದ್ವೈತವಿದ್ಯಾಶ್ರಮದ ಪ್ರಣವಾನಂದ ತೀರ್ಥ ಸ್ವಾಮೀಜಿ ವಹಿಸುವರು. ಐಎಎಸ್ ಅಧಿಕಾರಿ ಆರ್. ವಿಶಾಲ್ ಗರ್ಭಗುಡಿ ಉದ್ಘಾಟಿಸುವರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಉದ್ಯಮಿ ನಾರಾಯಣ ನಿರಂಜನ, ವಕೀ ತಾಜ್‌ಅಲಿ ನದಾಫ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಅ. ೨೪ರಂದು ಬೆಳಿಗ್ಗೆ ೧೧ಕ್ಕೆ ಸಾಯಿ ಸಮಾಧಿ ಉತ್ಸವ ಸಮಾರಂಭ ನಡೆಯಲಿದ್ದು, ಉದ್ಯಮಿ ರಿತೇಶ ತಾತುಸ್ಕರ್ ಉದ್ಘಾಟಿಸುವರು. ಉದ್ಯಮಿ ಡಾ. ಗಣೇಶ ಶೇಟ್, ನಿವೃತ್ತ ಡಿವಿಶನಲ್ ಸೆಕ್ಯೂರಿಟಿ ಕಮಿಷನರ್(ಆರ್‌ಪಿಎಫ್) ಕಲ್ಮೇಶ ಕಲ್ಕೂರ, ರತ್ನಾ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ೭ಕ್ಕೆ ಸಾಯಿ ರಥೋತ್ಸವ ಹಾಗೂ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಹುಬ್ಬಳ್ಳಿ ಶಹರ ತಹಶೀಲ್ದಾರ್ ಕಲಗೌಡ ಪಾಟೀಲ ರಥೋತ್ಸವಕ್ಕೆ ಚಾಲನೆ ನೀಡುವರು. ಪ್ರಕಾಶ ಪೂಜಾರಿ ಅತಿಥಿಯಾಗಿ ಪಾಲ್ಗೊಳ್ಳುವರು. ಸಂಜೆ ೭ಕ್ಕೆ ಸಾಯಿ ಸಮಾಧಿ ಉತ್ಸವದ ಮುಕ್ತಾಯ ಸಮಾರಂಭ ನಡೆಯಲಿದ್ದು, ಅತಿಥಿಯಾಗಿ ಜಯಲಕ್ಷ್ಮೀ ಅಂಗಡಿ ಆಗಮಿಸಲಿದ್ದಾರೆ. ೭.೩೦ಕ್ಕೆ ಪಂಢರಪುರ ಸಂಪ್ರದಾಯದ ಪ್ರಕಾರ ವಾರಕರಿ ಭಜನಾ ಕಾರ್ಯಕ್ರಮವನ್ನು ಮಹಾದೇವ ಸುಲಾಖೆ ಮತ್ತು ಸಂಗಡಿಗರಿಂದ ಜರುಗಲಿದೆ ಎಂದರು.
ಶಿರಡಿ ಸಾಯಿ ಸದ್ಭಕ್ತ ಮಂಡಳಿ ಉಪಾಧ್ಯಕ್ಷ ನರಸಿಂಗಸಾ ರತನ್, ಶರಣಪ್ಪ ದೇವನೂರ, ಕಾರ್ಯದರ್ಶಿ ಪಾಂಡುರಂಗ ಧೋಂಗಡಿ, ಸಹಕಾರ್ಯದರ್ಶಿ ಪ್ರಕಾಶ ಚಳಗೇರಿ, ಕೋಶಾಧ್ಯಕ್ಷ ಗೋವಿಂದ ಕೋಟಕರ್, ಬ್ರಜ ಮೋಹನ ಭುತಡಾ, ಪ್ರಿಯಾಂಕಾ ಕಠಾರೆ, ಪವಿತ್ರ ಕಡಪಟ್ಟಿ, ಎನ್ ಉಮೇಶ ನಾಯಕ, ಮೋಹನ್ ಗಿರಡ್ಡಿ, ರಮೇಶ ಕಾಲಿರಾ, ಶಂಕರಪ್ಪ ಯಲಿಗಾರ, ಪ್ರದೀಪಕುಮಾರ ಕಳ್ಳಿಮಠ, ಬಸನಗೌಡ ಕಡ್ಲಿ ಗೋಷ್ಠಿಯಲ್ಲಿದ್ದರು.