ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಆರೋಪಿಗೆ ಘಟಾನುಘಟಿ ನಾಯಕರ ಸಂಪರ್ಕ

Advertisement

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ವಿವಿಧ ಸ್ಪರ್ಧಾತ್ಮಕ ಹುದ್ದೆಗಳಿಗೆ ನಡೆದ ಪರೀಕ್ಷೆಗಳಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿರುವ ಪ್ರಮುಖ ಆರೋಪಿ ಕಿಂಗ್ ಪಿನ್ ಆರ್.ಡಿ.ಪಾಟೀಲ್,ಗೆ ರಾಜ್ಯ ಸರ್ಕಾರದ ಘಟಾನುಘಟಿ ನಾಯಕರ ಸಂಪರ್ಕವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿ ನಾಪತ್ತೆಯಾದ ಆರೋಪಿಯನ್ನು ಪೋಲಿಸರು ಇಂದಿಗೂ ಸಹ ಬಂಧಿಸಿಲ್ಲ.ಆರ್.ಡಿ.ಪಾಟೀಲ್ ಸಾಮಾನ್ಯವನಲ್ಲ.ಕಾಂಗ್ರೆಸ್ ಸರ್ಕಾರದ ಪ್ರಮುಖರ ಬೆಂಬಲ ಆತನಿಗೆ ಇದೆ ಎಂದು ಹೇಳಿದರು.
ಈ ಹಿಂದೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ನಡೆದಾಗ ಬಿಜೆಪಿ ಸರ್ಕಾರದ ವಿರುದ್ಧ ಈಗೀನ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದರು.ಅದಕ್ಕೂ ಮೀರಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.ಆದರೆ,ಇದೀಗ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು,ಇದಕ್ಕೆ ಏನಂತಾರೆ ಎಂಬುದು ಪ್ರಿಯಾಂಕ್ ಖರ್ಗೆ ಅವರೇ ಉತ್ತರ ನೀಡಬೇಕು ಎಂದು ಸವಾಲು ಹಾಕಿದರು.
ಸರ್ಕಾರದ ಉನ್ನತ ಮಟ್ಟದ ಐಪಿಎಸ್ ಅಧಿಕಾರಿಗಳು ಮಾಹಿತಿ ನೀಡಿದರೂ ಆರೋಪಿ ಆರ್.ಡಿ.ಪಾಟೀಲ್ ನ್ನು ಬಂಧಿಸಲು ಆಗಿಲ್ಲ.ಹೀಗಾಗಿ ಪೋಲಿಸರ ವೈಫಲ್ಯದಿಂದ ಆತ ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಪೋಲಿಸ್ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಬದಲಾಗಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಅಕ್ರಮ ನಡೆಸುವಂತಹ ವ್ಯಕ್ತಿಗಳಿಗೆ ಬೆಂಗಾವಲಾಗಿ ನಿಂತಿದೆ ಎಂಬ ಅನುಮಾನಗಳು ಇದೀಗ ವ್ಯಾಪಕವಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು,ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಅಕ್ರಮ ನಡೆದರು,ಅಕ್ರಮದ ಆರೋಪಿಯನ್ನು ಬಂಧಿಸದೆ ಇರುವುದು ನೂರಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ಹೇಳಿದರು.