15 ರಾಜ್ಯಗಳಲ್ಲಿ ಪಿಎಫ್‌ಐ ಸಂಘಟನೆ ವಿರುದ್ಧ ಏಕಕಾಲಕ್ಕೆ ಜಂಟಿ ದಾಳಿ

PFI
Advertisement

ನವದೆಹಲಿ: ಕೋಮು ದ್ವೇಷ ಹುಟ್ಟುಹಾಕಲು ಷಡ್ಯಂತ್ರ ನಡೆಸಿದ ಆರೋಪದ ಮೇಲೆ ರಾಷೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಕರ್ನಾಟಕ,‌ ಕೇರಳ ಸೇರಿದಂತೆ 15 ರಾಜ್ಯಗಳಲ್ಲಿ ಪಿಎಫ್‌ಐ ಸಂಘಟನೆ ವಿರುದ್ಧ ಏಕಕಾಲಕ್ಕೆ ಜಂಟಿ ದಾಳಿ ನಡೆಸಿವೆ. ಆಯಾ ರಾಜ್ಯಗಳ ಪೊಲೀಸರ ಸಹಕಾರದಿಂದ ಈ ದಾಳಿ ನಡೆದಿದೆ. ಈವರೆಗೆ ನೂರಕ್ಕೂ ಹೆಚ್ಚು ಪಿಎಫ್‌ಐ ನಾಯಕರನ್ನು ಬಂಧಿಸಲಾಗಿದ್ದು, ದಾಳಿ ಖಂಡಿಸಿ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಮೋದಿ ಸರ್ಕಾರದ ವಿರುದ್ಧ ಮುಸ್ಲಿಂ ಸಂಘಟನೆಗಳು ತಿರುಗಿಬಿದ್ದಿವೆ.
ಬುಧವಾರ ಮಧ್ಯರಾತ್ರಿಯಿಂದಲೇ ಎನ್‌ಐಎ ಮತ್ತು ಇ.ಡಿ ಕಾರ್ಯಾಚರಣೆ ನಡೆದಿದ್ದು, ಅಹಿತಕರ ಘಟನೆ ನಡೆಯದಂತೆ ದಾಳಿಗೆ ಮುನ್ನ ಎಲ್ಲೆಡೆ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ತನಿಖಾ ಸಂಸ್ಥೆಯ ಇತಿಹಾಸದಲ್ಲಿ ದೇಶದಲ್ಲಿ ನಡೆದ ಮೊದಲ ಬೃಹತ್ ಕಾರ್ಯಾಚರಣೆ ಇದಾಗಿದೆ. ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳು ತೀವ್ರಗಾಮಿ ಸಂಘಟನೆಗಳೊಂದಿಗೆ ಹೊಂದಿರುವ ಸಂಪರ್ಕ ಮತ್ತು ಹವಾಲಾ ಮೂಲಕ ಹಣದ ವ್ಯವಹಾರ ನಡೆಸಿರುವ ಬಗ್ಗೆ ದಾಖಲೆಗಳಿಗಾಗಿ ಶೋಧನೆ ನಡೆಯುತ್ತಿದೆ.
ಮಂಗಳೂರು, ಶಿವಮೊಗ್ಗ, ಕೇರಳದ ಹಲವೆಡೆ ಹಿಂದೂ ಕಾರ್ಯಕರ್ತರ ಕೊಲೆ, ದಾಳಿಗಳಲ್ಲಿ ಪಿಎಫ್‌ಐ ಕೈವಾಡವಿರುವ ಬಗ್ಗೆ ತನಿಖಾ ಸಂಸ್ಥೆಗಳಿಗೆ ಸಾಕ್ಷ್ಯಾಧಾರ ದೊರೆತ ಹಿನ್ನೆಲೆಯಲ್ಲಿ ಮೂಲಭೂತವಾದಿ ಸಂಘಟನೆಗಳ ನಿಷೇಧಕ್ಕೆ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು. ಕಳೆದೆರಡು ವರ್ಷಗಳಿಂದ ಪಿಎಫ್‌ಐ ಚಟುವಟಿಕೆ, ಹಣದ ವ್ಯವಹಾರದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿ ನಂತರ ಈ ಕಾರ್ಯಾಚರಣೆ ಕೈಗೊಂಡಿದೆ.
ಅಧಿಕಾರಿಗಳ ಜತೆ ಅಮಿತ್ ಶಾ ಸಭೆ
ಪಿಎಫ್‌ಐ ವಿರುದ್ಧ ದೇಶಾದ್ಯಂತ ನಡೆದ ಕಾರ್ಯಾಚರಣೆ ನಡುವೆಯೇ ಪರಿಸ್ಥಿತಿ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾ ತುರ್ತು ಸಭೆ ನಡೆಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹ ಇಲಾಖೆ ಕಾರ್ಯದರ್ಶಿ, ಎನ್‌ಐಎ ಡಿಜಿಪಿ ಇತರರು ಪಾಲ್ಗೊಂಡಿದ್ದರು.

ಸಂಪೂರ್ಣ ಸುದ್ದಿಗಾಗಿ ಸಂಯುಕ್ತ ಕರ್ನಾಟಕ ಓದಿ…