ಕೇಂದ್ರದಿಂದ ಇನ್ನೂ ಬಾರದ ಅನುದಾನ: ಯು.ಬಿ ವೆಂಕಟೇಶ ಪ್ರಶ್ನೆಗೆ ವಿಪಕ್ಷ ಕೆಂಡಾಮಂಡಲ

Advertisement

ಬೆಳಗಾವಿ: ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆ ಹಾಗೂ ಜಿಎಸ್‌ಟಿ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾಗಿದ್ದ ೪೦ ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವರು ಉತ್ತರಿಸಿದರು.
ಮಹಾರಾಷ್ಟ್ರ ಹೊರತುಪಡಿಸಿ ೨ ಲಕ್ಷ ೩೭ ಸಾವಿರ ಕೋಟಿ ರೂ. ಬಜೆಟ್ ಮಂಡಿಸಿದಾಗ ಕೇಂದ್ರ ಸರ್ಕಾರ ೪೩,೩೬೯ ಕೋಟಿ ರೂ.(ಶೇ. ೨೩.೩) ಅನುದಾನ ನೀಡಿತ್ತು. ಪ್ರಸ್ತುತ ೩ ಲಕ್ಷದ ೨೫ ಸಾವಿರ ಕೋಟಿ ರೂ. ಬಜೆಟ್ ಮಂಡಿಸಲಾಗಿದ್ದು, ಕೇಂದ್ರದಿಂದ ನಮಗೆ ಸಿಗುವುದು ೭೬ ಸಾವಿರ ಕೋಟಿ ರೂ.(ಶೇ.೧೭) ಮಾತ್ರ. ನಮ್ಮ ಬಜೆಟ್ ಗಾತ್ರ ಹೆಚ್ಚುತ್ತಿದೆಯೇ ಹೊರತು, ಕೇಂದ್ರದ ಪಾಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಬಜೆಟ್ ಗಾತ್ರಕ್ಕೆ ತಕ್ಕಂತೆ ಅನುದಾನ ನೀಡಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.
ನಮ್ಮ ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ನಾವು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ತೆರಿಗೆ ಪಾಲು ಹೆಚ್ಚಳವಾಗಿದೆ. ಆದರೆ, ಬಜೆಟ್ ಗಾತ್ರಕ್ಕೆ ಹೋಲಿಕೆ ಮಾಡಿದರೆ, ಕೇಂದ್ರದಿಂದ ೫ ವರ್ಷಗಳಲ್ಲಿ ೪೦ ಸಾವಿರ ಕೋಟಿ ರೂ. ಅನುದಾನ ಕಡಿಮೆಯಾಗಿದೆ. ಇದರಿಂದ ನಮ್ಮ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಹೊಡೆತ ಬಿದ್ದಿದೆ ಎಂದು ಯು.ಬಿ ವೆಂಕಟೇಶ ಪ್ರಶ್ನೆ ಕೇಳಿದ್ದರು.
ಕೇಂದ್ರ ಪುರಸ್ಕೃತ ಯೋಜನೆಯಿಂದ ೨೦ ಸಾವಿರ ಕೋಟಿ ರೂ. ಹಾಗೂ ಜಿಎಸ್‌ಟಿ ಪರಿಹಾರವಾಗಿ ೨೦ ಸಾವಿರ ಕೋಟಿ ರೂ. ರಾಜ್ಯಕ್ಕೆ ಬರಬೇಕು. ವರ್ಷದಿಂದ ವರ್ಷಕ್ಕೆ ಕೇಂದ್ರದ ತೆರಿಗೆ ಪಾಲು ಕಡಿಮೆಯಾಗುತ್ತಿದೆಯೇ ಹೊರತು, ಹೆಚ್ಚಳವಾಗುತ್ತಿಲ್ಲ. ನಮ್ಮ ಪಾಲು ಮಾತ್ರ ಹೆಚ್ಚಾಗುತ್ತಲೇ ಇದೆ. ಕೇಂದ್ರ ಸರ್ಕಾರ ನಮಗೆ ಆರ್ಥಿಕ ವರ್ಷದ ಅವಧಿಯೊಳಗೆ ನಮ್ಮ ಪಾಲಿನ ಹಣವನ್ನು ಕೊಡಬಹುದು ಎಂದು ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು.