ದುಃಖದ ಗರ್ಭದಲ್ಲಿ ಸುಖವಿದೆ

Advertisement

ಸುಖದ ಅನಂತರ ದುಃಖವು ಬರುತ್ತದೆ. ದುಃಖದ ಅನಂತರ ಸುಖವು ಬರುತ್ತದೆ. ಯಾರೊಬ್ಬನೂ ಕೂಡ ಕೇವಲ ದುಃಖವನ್ನು, ಕೇವಲ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ.
ಸುಖದಿಂದ ಹಿಗ್ಗಬಾರದು. ದುಃಖದಿಂದ ಕುಗ್ಗಬಾರದು. ಏಕೆಂದರೆ ಸುಖದ ಗರ್ಭದಲ್ಲಿ ದುಃಖವಿದೆ ಎಂಬ ಎಚ್ಚರಿಕೆಯನ್ನು ಹೊಂದಿ, ಹಿಗ್ಗದೇ ಸಮಚಿತ್ತನಾಗಿರಬೇಕು. ದುಃಖವು ಬಂದಾಗ, ದುಃಖದ ಗರ್ಭದಲ್ಲಿ ಸುಖವಿದೆ ಎಂದು ತಿಳಿದು ಕುಗ್ಗಬಾರದು.
ಸುಖ ದುಃಖಗಳೆರಡನ್ನೂ ಬಿಡಬೇಕು: ಸುಖವು ದುಃಖದಲ್ಲಿ ಪಾಲ್ಗೊಳ್ಳುತ್ತದೆ. ದುಃಖವು ಸುಖದಲ್ಲಿ ಕೊನೆಗೊಳ್ಳುತ್ತದೆ. ಸುಖವು ದುಃಖದ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ. ಹೀಗೆ ಸುಖ-ದುಃಖಗಳೆರಡು ಅನಿತ್ಯವಾಗಿವೆ. ಆದ್ದರಿಂದ ಈ ಎರಡನ್ನು ಪರಿತ್ಯಾಗ ಮಾಡಿ, ಶಾಶ್ವತಸುಖವನ್ನೇ ನಿಜವಾದ ವ್ಯಕ್ತಿಯು ಅಪೇಕ್ಷಿಸಬೇಕು.
ದುಃಖದ ಮೂಲ ಹುಡಕಬೇಕು: ಯಾವ ಕಾರಣದಿಂದ ದುಃಖವು ಬಂದಿರುತ್ತದೋ, ಯಾವ ಕಾರಣದಿಂದ ತಡೆಯಲಾರದ ಪರಿತಾಪವು ಬಂದಿರುತ್ತದೋ, ಯಾವ ಕಾರಣದಿಂದ ಆಯಾಸವು ಉಂಟಾಗುತ್ತದೋ, ಆ ಕಾರಣವನ್ನೇ ಮೂಲಸಹಿತ ತೆಗೆದುಹಾಕಬೇಕು. ಶೋಕ, ಪರಿತಾಪ, ಆಯಾಸಗಳು ಶರೀರದ ಅವಯವಗಳಿಂದಲೇ ಬಂದರೂ ಅಂಥಾ ಅಂಗವನ್ನೇ ಕತ್ತರಿಸಬೇಕು.
ಹಾವು ಕಚ್ಚಿದ ಅವಯವವನ್ನು ತುಂಡರಿಸಿದರೆ ಹೇಗೆ ಕ್ಷೇಮವಾಗುತ್ತದೋ, ಅದರಂತೆ ಯಾವ ಅವಿಭಾಜ್ಯ ಅಂಗದಿಂದ ದುಃಖವಾಗುತ್ತದೋ, ಆ ಅಂಗವನ್ನೇ ಕತ್ತರಿಸಬೇಕು. ಅವಿಭಾಜ್ಯವಾದ ಸಂಬಂಧಿಕರಿಂದ ಅಂಥಾ ದುಃಖವು ಹೆಚ್ಚುತ್ತಿದ್ದರೆ ಆ ವ್ಯಕ್ತಿಯನ್ನೇ ಪರಿತ್ಯಾಗ ಮಾಡಬೇಕು. ಯಾವ ದುರ್ಯೋಧನಾದಿಗಳಿಂದ ಅಸಾಧ್ಯವಾದ ದುಃಖವು ಪ್ರಾಪ್ತವಾಗಿತ್ತು. ಆದ್ದರಿಂದ ಆ ದುರ್ಯೋಧನನನ್ನು ಕೊಂದದ್ದು ಎಲ್ಲರಿಗೂ ಕ್ಷೇಮಕರವಾಗಿದೆ ಎಂದಭಿಪ್ರಾಯ.
ಯಾರು ವಿವೇಕಿ: ಸುಖವಾಗಲೀ, ದುಃಖವಾಗಲೀ, ಪ್ರಿಯವಾಗಲಿ, ಅಪ್ರಿಯಳಾಗಲೀ ಯಾವುದು ಬಂದರೂ ಎದೆಗುಂದದೆ ಸ್ವಾಗತ ಮಾಡಬೇಕು. ಜೀವನದಲ್ಲಿ ಸುಖದ ನಿರೀಕ್ಷೆಯಲ್ಲಿ ಕಾಲ ಕಳೆಯಬಾರದು. ಪ್ರಿಯವಾದದ್ದೇ ದೊರಕಬೇಕೆಂದು ಅಪೇಕ್ಷಿಸಬಾರದು. ದುಃಖವು ಬಂದರೆ ಅದನ್ನೂ ಸ್ವಾಗತ ಮಾಡಬೇಕು. ಅಪ್ರಿಯವಾದದ್ದು ಬಂದರೆ ಅದನ್ನೂ ಕೂಡ ಸ್ವಾಗತ ಮಾಡಬೇಕು. ಆಗಷ್ಟೇ ಅವನು ವಿವೇಕೆ ಎಂದು ಕರೆಸಿಕೊಳ್ಳುತ್ತಾನೆ.