ತೊನಸನಳ್ಳಿಯ ಗ್ರಾಮದಲ್ಲಿ ಸೂರ್ಯಮೂರ್ತಿ ಪತ್ತೆ

Advertisement

ಶಹಾಬಾದ: ತಾಲೂಕಿನ ತೊನಸನಳ್ಳಿ ಗ್ರಾಮದ ವೀರಭದ್ರ ದೇವಸ್ಥಾನ ದ ಪಕ್ಕದಲ್ಲಿ ಬಸವರಾಜ ನಾಗೇಂದ್ರ ಹೂಗಾರ ಅವರು ತಮ್ಮ ದೊಡ್ಡಿ.ತಿಪ್ಪೆ ಇದ್ದ ಜಾಗದಲ್ಲಿ ಮನೆ ಕಟ್ಟಲು ಶುಕ್ರವಾರ ಬೆಳಗ್ಗೆ ಪಾಯ ಅಗೆಯುತ್ತಿದ್ದಾಗ, ಸುಮಾರು ಆರು ಅಡಿ ಆಳದಲ್ಲಿ ಬೊರಲು ಬಿದ್ದ ಸ್ಥಿತಿಯಲ್ಲಿ ಮೂರ್ತಿ ಪತ್ತೆಯಾಗಿದೆ.
ಮೂರ್ತಿ ಹೊರ ತೆಗೆದು ತೊಳೆದು, ಮೂರ್ತಿಯ ಭಾವಚಿತ್ರವನ್ನು ಸಂಭಂಧಿಕರೊಬ್ಬರ ಮೂಲಕ ಖ್ಯಾತ ಇತಿಹಾಸ ಸಂಶೋಧಕ ಡಿ.ಎನ್ ಅಕ್ಕಿ ಅವರಿಗೆ ಕಳುಹಿಸಿದಾಗ ಈ ಮೂರ್ತಿ ಸೂರ್ಯ ಮೂರ್ತಿ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಖ್ಯಾತ ಸಂಶೋಧಕರಾದ ಬೆಂಗಳೂರಿನ ಡಾ.ರಾಘವೇಂದ್ರ ಕುಲಕರ್ಣಿ, ಡಾ.ಎಂ.ಜಿ.ಮಂಜುನಾಥ ಅವರ ಸಲಹೆ ಪಡೆದಾಗ, ಈ ಮೂರ್ತಿ ಸೂರ್ಯ ಮೂರ್ತಿಯಾಗಿದ್ದು ಪಕ್ಕದಲ್ಲಿ ಸೂರ್ಯಪತ್ನಿಯರಾದ ಉಷಾ.ಪ್ರತ್ಯುಷಾ ಮೂರ್ತಿಗಳಿವೆ, ಇದು 12 ನೇ ಶತಮಾನದ ಮೂರ್ತಿಯಾಗಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ಸಂಶೋಧಕರಾದ ಅಕ್ಕಿ ಅವರ ಪ್ರಕಾರ ಈ ಮೂರ್ತಿ ಅತ್ಯಂತ ಸುಂದರವಾಗಿದ್ದು,ಅಂಗ ರಚನಾ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದೆ. ಮೂರ್ತಿಯು ಅತ್ಯಂತ ಭಾವನಾತ್ಮಕ ವಾಗಿದ್ದು, ಸುಂದರ ಕಿರೀಟ,ತಲೆಯ ಮೇಲೆ ಐದು ಹೆಡೆಯ ಹಾವು,ಕೈಯಲ್ಲಿ ಕಮಲದ ಹೂವು.ಕಿವಿಯಲ್ಲಿ ಕರ್ಣಕುಂಡಲ.ಯಜ್ಞೋಪವಿತ,ಉಪವಿತ, ಉದರ ಬಂಧ, ಕಂಠಾಭರಣ.ಸುವರ್ಣಹಾರ, ಕಾಲಗಡಗ ಹೊಂದಿದೆ. ಮೂರ್ತಿಯ ತಲೆಯ ಮೇಲೆ ಇರುವ ಐದು ಹೆಡೆಯ ಹಾವಿನ ಮುಖ, ಎಡಗೈಯಲ್ಲಿ ಇರುವ ಕಮಲದ ಹೂವು ಸ್ವಲ್ಪ ಭಿನ್ನವಾಗಿವೆ. ಈ ಮೂರ್ತಿಯೊಂದಿಗೆ ಒಂದು ಮೂರ್ತಿಯ ಎಡಗೈ ಮಾತ್ರ ಇದ್ದು,ಮೇಲಿನ ಕೈಯಲ್ಲಿ ಡಮರು ಹೊಂದಿದ್ದು,ಕೆಳಭಾಗದ ಕೈ ತುಂಡಾಗಿದೆ. ಪ್ರಾಚೀನ ಇತಿಹಾಸ ಸಾರುವ ಈ ಗ್ರಾಮದಲ್ಲಿರುವ ಶಿಲಾ ಮೂರ್ತಿಗಳ ಕುರಿತು ಪ್ರಾಚ್ಯ ವಸ್ತು ಇಲಾಖೆ ಸೂಕ್ತ ಸಂಶೋದನೆ ನಡೆಸುವದು ಅತ್ಯವಶ್ಯಕವಾಗಿದೆ.