ಬಿಜೆಪಿಯಲ್ಲಿನ ಭಿನ್ನಮತ ಶಮನ

ಈಶ್ವರಪ್ಪ
Advertisement

ಬಾಗಲಕೋಟೆ: ರಾಷ್ಟ್ರೀಯ ನಾಯಕರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೇಟಿ ಮಾಡಿದ ನಂತರ ಪಕ್ಷದಲ್ಲಿ ಭಿನ್ನಮತ ಶಮನಗೊಂಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಮಾಜಿ ಸಚಿವ ವಿ.ಸೋಮಣ್ಣ ಅವರು ಅಸಮಾಧಾನಗೊಂಡಿದ್ದು ನಿಜ. ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹಿರಿಯ ನಾಯಕರನ್ನು ಭೇಟಿಯಾಗಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಭರವಸೆಯನ್ನು ನೀಡಿದ್ದಾರೆ. ನಿನ್ನೆಯವರೆಗೂ ಬಿಜೆಪಿಯಲ್ಲಿ ಅಸಮಾಧಾನವಿತ್ತು. ಆದರೆ ಇಂದು ಇಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ. ರಾಜ್ಯದಲ್ಲಿ ಸಣ್ಣಪುಟ್ಟ ಗೊಂದಲಗಳಿದ್ದವು. ಈಗ ಅದಕ್ಕೂ ತಡೆ ಬಿದ್ದಿದೆ. ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದರು. ಯತ್ನಾಳ, ಬೆಲ್ಲದ, ಸೋಮಣ್ಣ ಅವರು ಪಕ್ಷದ ವಿರುದ್ಧವಾಗಿ ಎಂದಿಗೂ ಮಾತನಾಡಿಲ್ಲ. ವ್ಯಕ್ತಿ ವಿಚಾರವಾಗಿ ಅವರಿಗೆ ಅಸಮಾಧಾನವಿತ್ತು. ಈಗ ಅದು ಸಹ ಸರಿಯಾಗಲಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜಿಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ರಾಜ್ಯದಲ್ಲಿ ಇನ್ನು ಶುಕ್ರದೆಸೆ ಆರಂಭವಾಗಲಿದೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ೨೮ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸುವುದಾಗಿ ಹೇಳಿದ್ದಾರೆ. ತಾವಾಗಲಿ, ತಮ್ಮ ಪುತ್ರನಾಗಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದು ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ ಎಂದರು.