ರಾಜಕೀಯ ಲಾಭಕ್ಕಾಗಿ ಹಿಜಾಬ್ ಪ್ರಸ್ತಾಪ

Advertisement

ಬೆಂಗಳೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಿ ಜನರ ದಾರಿ ತಪ್ಪಿಸಲು, ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹಿಜಾಬ್ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ. ಎಲ್ಲಿ ಡ್ರೆಸ್ ಕೋಡ್ ಇದೆ ಅಲ್ಲಿ ಮಾತ್ರ ನಿಷೇಧ ಇದೆ. ಮಹಿಳೆಯರು ಬೇರೆಡೆ ಎಲ್ಲಿ ಬೇಕು ಅಲ್ಲಿ ಹಾಕಿಕೊಳ್ಳಲು ಅವಕಾಶ ಇದೆ. ಹಿಜಾಬ್ ನಿಷೇಧ ಆಗಿಯೇ ಇಲ್ಲ. ಅದನ್ನು ವಾಪಸ್ ಪಡೆಯುವ ಪ್ರಶ್ನೆ ಎಲ್ಲಿ ಬಂತು ಎಂದು ಪ್ರಶ್ನಿಸಿದರು.
1984 ರಲ್ಲಿ ಸಮಗ್ರ ಶಿಕ್ಷಣ ಕಾಯ್ದೆ ಅನ್ವಯ ಶಾಲಾ ಸಮವಸ್ತ್ರ ಜಾರಿಗೆ ತರಲಾಗಿತ್ತು, ಅದನ್ನು ನಮ್ಮ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಮುಖ್ಯಮಂತ್ರಿಗಳು ಅದನ್ನು ಹಿಂದೆ ಪಡೆಯುವ ಮಾನಾಡಿದ್ದಾರೆ. ಹಿಜಾಬ್ ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿ ಇದೆ. ರಾಜಕೀಯ ಕಾರಣಕ್ಕೆ ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳು ಅಲ್ಪ ಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಘೋಷಣೆ ಮಾಡಿದರು. ಅಭಿವೃದ್ಧಿಗೆ ಇವರ ಬಳಿ ಹಣ ಇಲ್ಲ. ಅವರ ಪಕ್ಷದ ಶಾಸಕರೆ ಬಹಿರಂಗವಾಗಿ ಹೇಳಿದ್ದಾರೆ.‌ ಪತ್ರ ಕೂಡ ಬರೆದಿದ್ದಾರೆ.
ರಾಜ್ಯದಲ್ಲಿ ಬರ ಇದೆ. ಮಹಿಳೆಯರಿಗೆ ರಕ್ಷಣೆ ಇಲ್ಲ. ಮಕ್ಕಳಿಂದ ಶೌಚಾಲಯ ತೊಳೆಸುವ ಮಟ್ಟಕ್ಕೆ ಈ ಸರ್ಕಾರ ದಿವಾಳಿಯಾಗಿದೆ. ಎಲ್ಲ ಸಮಸ್ಯೆಗಳ ಮರೆತು ರಾಜ್ಯದ ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಐಟಿ ರೇಡ್ ಆಗಿ ಕಾಂಟ್ರಾಕ್ಟರ್ ಬಳಿ ಕೋಟ್ಯಂತರ ರೂ ಹಣ ಸಿಕ್ಕಿತು ಆಗಲೂ ದಾರಿ ತಪ್ಪಿಸುವ ಕೆಲಸ ಮಾಡಿದರು. ಯಾವುದೇ ಅಭಿವೃದ್ಧಿ ಮಾಡದ ಸರ್ಕಾರ ರಾಜ್ಯದಲ್ಲಿ ಬಂದಿದೆ.
ಶಾಲಾ ಮಕ್ಕಳಲ್ಲಿ ಒಡಕುಂಟು ಮಾಡುವ ಉದ್ದೇಶ ಇದರಲ್ಲಿ ಇದೆ. ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ತಾವು ಯಾವ ಧರ್ಮಕ್ಕೆ ಸೇರಿದ್ದೆವೆ ಎಂದು ವಿಷ ಬೀಜ ಬಿತ್ತುವ ಪ್ರಯತ್ನ ನಡೆತುತ್ತಿದೆ. ರಾಜಕೀಯ ಉದ್ದೇಶಕ್ಕೆ ಮಾಡುತ್ತಿರುವ ಈ ಪ್ರಯತ್ನಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದರು.
ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇರಾಕ್, ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ಇದ್ದಾಗ ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು. ಕೋರ್ಟ್ ಈ ಬಗ್ಗೆ ಗಮನ ಹರಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಇದೇ ವೇಳೆ ಬರಗಾಲದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಹಾಗೂ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.