ತಾಕತ್ತು ಏನು ಎಂಬುದನ್ನು ತೋರಿಸುತ್ತೇನೆ

Advertisement

ಹುಬ್ಬಳ್ಳಿ: ಧಮ್, ತಾಕತ್ತು ಎಂದು ಮಾತನಾಡುವುದನ್ನು ಬಿಟ್ಟು ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ೫೦೦ ಕೋಟಿ ರೂ. ಅನುದಾನ ತರಲಿ. ನಾನೇ ಅವರ ಮನೆಗೆ ಹೋಗಿ ಸನ್ಮಾನ ಮಾಡುತ್ತೇನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಮುಖ್ಯಮಂತ್ರಿ, ವಿ.ಪ. ಸದಸ್ಯ ಜಗದೀಶ ಶೆಟ್ಟರ್‌ಗೆ ಸವಾಲು ಹಾಕಿದ್ದಾರೆ.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅವರದ್ದೇ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ ಅವರೂ ಪ್ರಯತ್ನ ಪಟ್ಟರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುತ್ತದೆ. ನಾನು ಏನು ಮಾಡಬೇಕು, ನನ್ನ ತಾಕತ್ತು ಏನು ಎಂಬುದನ್ನು ತೋರಿಸುತ್ತೇನೆ. ೧೦ ಕೋಟಿ ರೂ. ಅನುದಾನ ತರುವಂತೆ ಶೆಟ್ಟರ ಸವಾಲು ಹಾಕಿದ್ದರು. ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಹತ್ತು ಕೋಟಿ ಅನುದಾನ ತಂದು ತೋರಿಸುತ್ತೇನೆ ಎಂದರು.
ನಾನು ರೆಡಿಮೇಡ್ ಕ್ಷೇತ್ರವನ್ನ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿರುವ ಶೆಟ್ಟರ, ಕಳೆದ ಮೂವತ್ತು ವರ್ಷಗಳಿಂದ ಸೆಂಟ್ರಲ್ ಕ್ಷೇತ್ರವನ್ನು ರೆಡಿ ಮಾಡಲು ಬಿಜೆಪಿ ಕಾರ್ಯಕರ್ತರು ಪಟ್ಟ ಶ್ರಮವನ್ನು ಮರೆತಿದ್ದಾರೆ. ಇವರಿಗಾಗಿ ಹೊಡೆತ ತಿಂದಿದ್ದೇವೆ. ಗೋಲಿಬಾರ್ ನಡೆದು ಅದೆಷ್ಟೋ ಜನ ಪ್ರಾಣವನ್ನ ಕಳೆದುಕೊಂಡಿದ್ದಾರೆ. ನನ್ನೊಬ್ಬನಿಂದ ಮಾತ್ರ ಶಾಸಕಾನಾಗಲು ಸಾಧ್ಯವಿಲ್ಲ. ಸಾವಿರಾರು ಕಾರ್ಯಕರ್ತರ ಶ್ರಮ, ಲಕ್ಷಾಂತರ ಮತದಾರರ ಆಶೀರ್ವಾದದಿಂದ ಶಾಸನಾಗಿದ್ದೇನೆ ಎಂದು ಕುಟುಕಿದರು.
ತಾಂತ್ರಿಕ ಕಾರಣಗಳಿಂದ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ ಎಂಬ ಜಗದೀಶ ಶೆಟ್ಟರ ಹೇಳಿಕೆಗೆ ತಿರುಗೇಟು ನೀಡಿದ ಟೆಂಗಿನಕಾಯಿ, ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲವಾದ ತಾಂತ್ರಿಕ ಸಮಸ್ಯೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಾತ್ರ ಬಂತಾ ಎಂದು ಆಕ್ರೋಷ ವ್ಯಕ್ತಪಡಿಸಿದರಲ್ಲದೇ, ಯಾವ ಕಾರಣಕ್ಕಾಗಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಬಹಿರಂಗ ಪಡಿಸಲಿ ಎಂದು ಆಗ್ರಹಿಸಿದ್ದಾರೆ.