ಯತ್ನಾಳ್ ಬಗ್ಗೆ ಮಾತನಾಡಲ್ಲ

Advertisement

ದಾವಣಗೆರೆ: ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಡ್‌ಗೆ ದೂರು ಕೊಡಲು ಹೋಗುವುದಿಲ್ಲ. ಮುಂಬರುವ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಜಿಎಂಐಟಿ ಅತಿಥಿಗೃಹದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಆರೋಪ, ಟೀಕೆ ಕುರಿತಂತೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಜಾತಿಗಣತಿ ವಿಚಾರ ಕುರಿತಂತೆ ವಿರೋಧ ವ್ಯಕ್ತವಾಗಿದೆ. ವೈಜ್ಞಾನಿಕವಾಗಿ ಜಾತಿಗಣತಿ ಆಗಬೇಕು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮದೂ ಸಹ ಇದೇ ಅಭಿಪ್ರಾಯವಾಗಿದೆ. ಜನರ ವಿರೋಧದ ನಡುವೆಯೇ ಸರ್ಕಾರ ಯಾವುದೇ ಕಾರಣಕ್ಕೂ ವರದಿ ಅಂಗೀಕರಿಸಬಾರದು ಎಂದು ಅಭಿಪ್ರಾಯಪಟ್ಟರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಬಿಜೆಪಿ ಕರ್ನಾಟಕದ ನೂತನ ರಾಜ್ಯ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ‌ ನೂತನವಾಗಿ ನೇಮಕಗೊಂಡ ಎಲ್ಲಾ ರಾಜ್ಯ ಪದಾಧಿಕಾರಿಗಳನ್ನು ಅಳೆದು ತೂಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಆಯ್ಕೆ ಪಾರದರ್ಶಕವಾಗಿ ನಡೆದಿದೆ, ಅಸಮಾಧಾನ ಕುರಿತಂತೆ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ನಾವು ಅಲ್ಪಸಂಖ್ಯಾತ ವಿರೋಧಿಗಳಲ್ಲ. ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಬಿಡಬೇಕು. ಇದರಿಂದ ಯಾವುದೇ ಪ್ರಯೋಜನವಾಗದು. ಹಿಜಾಬ್ ವಾಪಸ್ ಪಡೆಯುವ ಕುರಿತಂತೆ ನಾವು ತೀವ್ರ ಹೋರಾಟ ಮಾಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಉಲ್ಟಾ ಹೊಡೆದಿದ್ದಾರೆ. ಮೊದಲು ಹಿಜಾಬ್ ವಾಪಸ್ ಪಡೆಯುತ್ತೇವೆ ಎಂದರು. ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇನ್ನು ನಿರ್ಧಾರ ಆಗಿಲ್ಲ ಎನ್ನುತ್ತಾರೆ. ಸಮಾಜದಲ್ಲಿ ಧರ್ಮ- ಧರ್ಮಗಳ ನಡುವೆ ವಿಷ ಬೀಜ ಬಿತ್ತುವ, ಕಂದಕ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಯಡಿಯೂರಪ್ಪ ಹೇಳಿದರು.