ಕರ್ನಾಟಕ ಮಹಿಳಾ ಕ್ರಿಕೆಟ್ ಟಿ20 ತಂಡಕ್ಕೆ ವಿಜಯಪುರದ ಕುವರಿ

ಕ್ರಿಕೆಟ್ ಟಿ20
Advertisement

ವಿಜಯಪುರ: ಬಿಎಲ್‌ಡಿಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಬಿ.ಕಾಂ. ಮೊದಲ ವರ್ಷದ ವಿದ್ಯಾರ್ಥಿನಿ ಅನ್ನಪೂರ್ಣ ಭೋಸಲೆ 19 ವರ್ಷದೊಳಗಿನ ಕರ್ನಾಟಕ ಮಹಿಳಾ ಟಿ-20 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 15 ಜನ ಆಟಗಾರರ ಪಟ್ಟಿಯನ್ನು ಇಂದು ಪ್ರಕಟಿಸಿದ್ದು, ಅನ್ನಪೂರ್ಣ ಜಿ. ಭೋಸಲೆ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಆಯ್ಕೆಯಾಗಿದ್ದಾರೆ.
ಹೈದರಾಬಾದ್‌ನಲ್ಲಿ ಅ. 1ರಿಂದ 8ರ ವರೆಗೆ ಮಹಿಳೆಯರ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. 2019ರಲ್ಲಿ 16 ವರ್ಷದೊಳಗಿನ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದ ಅವರು, 2021ರಲ್ಲಿ 19 ವರ್ಷದೊಳಗಿನ ಏಕದಿನ ತಂಡಕ್ಕೂ ಆಯ್ಕೆಯಾಗಿದ್ದಾರೆ. ಈಗ 19 ವರ್ಷದೊಳಗಿನ ಮಹಿಳಾ ಟಿ-20 ತಂಡಕ್ಕೆ ಆಯ್ಕೆಯಾಗಿದ್ದಾರೆ. 2020ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಆಯ್ಕೆ ನಡೆದಿರಲಿಲ್ಲ.
ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ. ಪಾಟೀಲ ಅವರು ಅನ್ನಪೂರ್ಣ ಭೋಸಲೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿ ಎಂದು ಶುಭ ಕೋರಿದ್ದಾರೆ.