ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ

Advertisement

ಹುಬ್ಬಳ್ಳಿ: ಎಚ್‌ಸಿಜಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಯಿಂದ ಗ್ರೀನ್ ಕಾರಿಡಾರ್ ಮೂಲಕ ಬೆಳಗಾವಿ ಮತ್ತು ಹುಬ್ಬಳ್ಳಿಯ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಹೃದಯ, ಮೂತ್ರಪಿಂಡ ಒಳಗೊಂಡಂತೆ ನಾಲ್ಕು ಅಂಗಗಳನ್ನು ರವಾನಿಸಿದ ಘಟನೆ ಬುಧವಾರ ನಡೆಯಿತು.
ಈ ಪೈಕಿ ಒಂದು ಅಂಗವನ್ನು ಬೆಳಗಾವಿಗೆ, ಎರಡು ಅಂಗಗಳನ್ನು ಹುಬ್ಬಳ್ಳಿಯ ಇತರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎಚ್‌ಸಿಜಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞ ಮತ್ತು ಕಸಿ ಶಸ್ತ್ರಚಿಕಿತ್ಸಕ ಡಾ. ಭುವನೇಶ್ ಎನ್. ಆರಾಧಿ ಮತ್ತು ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಮತ್ತು ಕಸಿ ವೈದ್ಯ ಡಾ. ಚೇತನ್ ಮುದ್ರಬೆಟ್ಟು ಅವರ ನೇತೃತ್ವದಲ್ಲಿ ಅಂಗಗಳನ್ನು ರವಾನಿಸಲಾಯಿತು.
೩೬ ವರ್ಷದ ಮಲ್ಲಪ್ಪ ನಿಂಗಪ್ಪ ಉದ್ದಾರ ಅವರು ರಸ್ತೆ ಅಪಘಾತದಲ್ಲಿ ಡಿ. ೨೬ರಂದು ಗಾಯಗೊಂಡಿದ್ದರು. ಈ ವೇಳೆ ಅವರನ್ನು ಎಚ್‌ಸಿಜಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಗೆ ದಾಖಲಾಗಿಸಿತ್ತು. ಜ. ೨ರಂದು ಅವರ ಬ್ರೈನ್ ಡೆಡ್ ಆಗಿದ್ದರಿಂದ ಆತನ ಕುಟುಂಬದವರು ಅಂಗಾಂಗಳ ದಾನ ಮಾಡಲು ನಿರ್ಧಾರ ಮಾಡಿದ್ದರು. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ವ್ಯಕ್ತಿ ಹಲವರ ಬಾಳಿಗೆ ಬೆಳಕಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಎಚ್‌ಸಿಜಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಯಿಂದ ಹಸಿರು ಕಾರಿಡಾರ್ ಮೂಲಕ ಬೆಳಗಾವಿ ಮತ್ತು ಹುಬ್ಬಳ್ಳಿಯ ಮೂರು ವಿಭಿನ್ನ ಆಸ್ಪತ್ರೆಗಳಿಗೆ ಏಕಕಾಲದಲ್ಲಿ ಸಂಪರ್ಕಿಸುವ ಯೋಜನೆ ರೂಪಿಸಿ ಅಂಗಾಂಗ ರವಾನೆ ಮಾಡಲಾಯಿತು. ಈ ಸಮಯದಲ್ಲಿ ಸಂಚಾರಿ ಪೊಲೀಸರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.