ಅರ್ಥಿಕ ಬೆಳವಣಿಗೆ ಲಾಭ ಕೆಲವರಿಗೆ ಮಾತ್ರ ಸೀಮಿತ

Advertisement

ಹೊಸ ವರ್ಷದ ಅರುಣೋದಯವಾಗಿದೆ. ಆರ್ಥಿಕ ಬೆಳವಣಿಗೆ ಎಲ್ಲರನ್ನು ತಲುಪಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಕೆಲವರು ಇನ್ನೂ ಸಂತಸ ಕಂಡಿಲ್ಲ. ೧೪೨ ಕೋಟಿ ಜನರಲ್ಲಿ ಎಷ್ಟು ಜನ ದುಃಖದಲ್ಲಿದ್ದಾರೋ ತಿಳಿಯದು. ಹಿಂದೆ ಎಂದೂ ಕಾಣದ ಆರ್ಥಿಕ ಬೆಳವಣಿಗೆ ಕಂಡು ಬಂದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ನಿಜವಾಗಿ ಹೇಳಬೇಕೆಂದರೆ ಆರ್ಥಿಕ ಬೆಳವಣಿಗೆ ಲಾಭ ಇನ್ನೂ ಹೆಚ್ಚು ಜನರನ್ನು ತಲುಪಿಲ್ಲ. ೨೦೦೬-೨೦೦೮ ಸುವರ್ಣ ಯುಗ. ಜಿಡಿಪಿ ಬೆಳವಣಿಗೆ ಶೇ. ೯.೫, ೯.೬ ಮತ್ತು ೯.೩. ಮೋದಿ ಸರ್ಕಾರದ ಅಭಿವೃದ್ಧಿ ಶೇ.೫.೭ ದಾಟಿಲ್ಲ. ೨೩-೨೪ ರ ಬೆಳವಣಿಗೆ ಶೇ.೬.೫ ಎಂದಿಟ್ಟುಕೊಂರೂ ಬೆಳವಣಿಗೆ ಶೇ. ೫.೮ಕ್ಕೆ ಸೀಮಿತಗೊಳ್ಳುತ್ತದೆ.
ಕಡಿಮೆ ನೇರ ತೆರಿಗೆ
೨೩-೨೪ ರಲ್ಲಿ ನೇರ ತೆರಿಗೆ ಪ್ರಮಾಣ ಕಡಿಮೆ. ಶೇ.೬.೫ ಎಂದಿಟ್ಟುಕೊಂಡರೂ ಶೇ.೫.೮ಕ್ಕೆ ಸೀಮಿತಗೊಳ್ಳುತ್ತದೆ. ಪರೋಕ್ಷ ತೆರಿಗೆ ಹೆಚ್ಚು ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. ರಸ್ತೆ, ರೈಲು, ಬಂದರು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಗೆ ಹೆಚ್ಚಿನ ಹಣ ವಿನಿಯೋಗವಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ಹೂಡಿಕೆ ಆಗಿಲ್ಲ. ಮಹಿಳೆಯರಿಗೆ ನೀಡಿದ ಹೆಚ್ಚಿನ ಸವಲತ್ತು ಸಾಕಷ್ಟು ಬದಲಾವಣೆ ತಂದಿದೆ. ಆರ್ಥಿಕ ಬೆಳವಣಿಗೆ ಕೆಲವು ವರ್ಗಗಳಿಗೆ ಸೀಮಿತಗೊಂಡಿದೆ. ಸಂತೃಪ್ತರಾದವರು ಬಹಳ ಕಡಿಮೆ. ಸಾಫ್ಟ್ವೇರ್, ಉದ್ಯಮಿಗಳು, ನ್ಯಾಯಮೂರ್ತಿಗಳು, ಲೆಕ್ಕ ಪರಿಶೋಧಕರು, ವೈದ್ಯರು, ವಕೀಲರು, ವಿವಿ ಮತ್ತು ಕಾಲೇಜು ಶಿಕ್ಷಕರು, ಸರ್ಕಾರಿ ನೌಕರರು, ಶ್ರೀಮಂತ ರೈತರು, ಲೇವಾದೇವಿಯವರು ಅರಾಮಾಗಿದ್ದಾರೆ. ಅಭಿವೃದ್ಧಿ ಪಥ ಇದ್ದಂತೆ ಕತ್ತಲೆಯ ಭಾಗಗಳೂ ಇರುತ್ತವೆ. ಅಭಿವೃದ್ಧಿಪಥದಲ್ಲಿ ಕೆಲವು ಕಡೆ ಕತ್ತಲೆಯ ದಿನಗಳು ಕಂಡು ಬರುವುದೂ ನಿಜ. ೮೨ ಕೋಟಿ ಜನ ಪ್ರತಿ ತಿಂಗಳೂ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಸರ್ಕಾರಕ್ಕೆ ಇದು ಹೆಮ್ಮೆಯ ಸಂಗತಿಯಾದರೂ ಕೆಲವು ಕಡೆ ಇನ್ನೂ ಜನ ಹಸಿವಿನಿಂದ ಹೊರ ಬಂದಿಲ್ಲ. ಅಪೌಷ್ಟಿಕತೆ ಹೋಗಿಲ್ಲ. ನಿರುದ್ಯೋಗ ಪ್ರಮುಖ ಕಾರಣ. ಇದನ್ನು ಹೋಗಲಾಡಿಸಲು ಸರ್ಕಾರ ಕ್ರಮ ಕೈಗೊಂಡಿಲ್ಲ. ನರೇಗಾ ಯೋಜನೆ ಬಡವರಿಗೆ ವರದಾನ. ಏಪ್ರಿಲ್ ೨೦೨೨ ರಿಂದ ಸರ್ಕಾರ ೭.೬ ಕೋಟಿ ಕಾರ್ಮಿಕರ ಹೆಸರನ್ನು ಕಡತದಿಂದ ಕೈಬಿಟ್ಟಿದೆ. ೧೦ ಕೋಟಿ ಜನ ಸಹಾಯಧನದಿಂದ ದೂರ ಉಳಿದಿದ್ದಾರೆ. ಇವರ ಜನ ದುರ್ಬರವಾಗಿದೆ.
ನಿರುದ್ಯೋಗ-ಹಣದುಬ್ಬರ
ಉದ್ಯೋಗದಲ್ಲಿ ಇರದವರು ನಿಜಕ್ಕೂ ಹೊಸ ವರ್ಷದ ಸಂತಸ ಹಂಚಿಕೊಳ್ಳಲು ಸಾಧ್ಯವಾಗಿಲ್ಲ. ಹೈಸ್ಕೂಲ್ ಹಂತದಲ್ಲಿರುವ ಮಕ್ಕಳಿಗೆ ಕೌಶಲ್ಯ ತರಬೇತಿ ಇನ್ನೂ ಜಾರಿಗೆ ಬಂದಿಲ್ಲ. ನಿರುದ್ಯೋಗ ಮುಂದುವರಿದಿದೆ. ಸ್ವಯಂ ಉದ್ಯೋಗ ಕೈಗೊಂಡಲ್ಲಿ ನಿರುದ್ಯೋಗದ ಪ್ರಮಾಣ ಇಳಿಮುಖಗೊಳ್ಳುತ್ತದೆ. ಯುವಕರಲ್ಲಿ ಶೇ. ೧೦ ರಷ್ಟು ನಿರುದ್ಯೋಗ ಇದೆ. ೨೫ ವಯೋಮಾನದ ಪದವಿ ಪಡೆದವರು ನಿಜಕ್ಕೂ ದುಃಖಿಗಳು. ಅವರಲ್ಲಿ ಶೇ.೪೨ ರಷ್ಟು ಇನ್ನೂ ಉದ್ಯೋಗದ ಬೆಳಕು ಕಂಡಿಲ್ಲ. ಹಣದುಬ್ಬರದಿಂದ ನೊಂದವರ ಮತ್ತೊಂದು ವರ್ಗವೂ ಇದೆ. ದೇಶದ ಒಟ್ಟು ಆಸ್ತಿಯಲ್ಲಿ ಶೇ.೬೦ ರಷ್ಟು ಜನಸಂಖ್ಯೆಯಲ್ಲಿ ಶೇ. ೧೦ ರಷ್ಟು ಜನ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ. ೨೦೨೨ ರಲ್ಲಿ ಹಣದಬ್ಬರ ಶೇ.೬.೭ ೨೦೨೩ ರಲ್ಲಿ ಹಣದುಬ್ಬರ ಶೇ.೨ ರಿಂದ ೬ ರೊಳಗೆ ಇತ್ತು. ಈಗ ಮೀರಿದೆ. ನವೆಂಬರ್‌ನಲ್ಲಿ ಅದು ಶೇ.೫.೫೫ ಇತ್ತು. ಆಹಾರ ಹಣದುಬ್ಬರ ಹೆಚ್ಚಿನ ಪ್ರಮಾಣದಲ್ಲೇ ಇದೆ. ಆರ್ಥಿಕ ಕೊರತೆ ನಿಯಂತ್ರಿಸುವ ಗುರಿ ಹಾಗೇ ಇದೆ. ತಲುಪುವುದು ಕಷ್ಟವಾಗಿದೆ. ಮೋದಿ ಸರ್ಕಾರ ಎಲ್ಲರೂ ಸಂತೋಷವಾಗಿದ್ದಾರೆ ಎಂದು ಹೇಳುತ್ತಿದ್ದರೂ ಸರ್ಕಾರದ ನೀತಿ ಪೂರಕವಾಗಿಲ್ಲ. ಹಣದುಬ್ಬರ, ನಿರುದ್ಯೋಗ ಕಡಿಮೆಯಾಗಿಲ್ಲ. ಆರ್ಥಿಕ ಬೆಳವಣಿಗೆ ಶ್ರೀಮಂತರಿಗೆ ಸೀಮಿತಗೊಂಡಿದೆ. ಆಸ್ತಿಯ ಕ್ರೋಡೀಕರಣ ಮುಂದುವರಿದಿದೆ. ಕೆಲವರಿಗೆ ಹೊಸ ವರ್ಷ ಸಂತಸ ತಂದಿದೆ. ಬಹುತೇಕ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಇವರತ್ತ ಸರ್ಕಾರ ಗಮನ ಹರಿಸುವುದು ಅಗತ್ಯ. ಸರ್ವರಿಗೆ ಸಮಪಾಲು ಸಮಬಾಳು ಸಿಗಬೇಕು. ಆಗ ಆರ್ಥಿಕ ಬೆಳವಣಿಗೆ ನಿಜವಾದ ಅರ್ಥದಲ್ಲಿ ದೇಶದ ಬದುಕಿನಲ್ಲಿ ಬದಲಾವಣೆ ತರಬಲ್ಲುದು.