ಇಂಡಿಯಾ ಮೈತ್ರಿ ಕೂಟದ ಮಮತೆ ತೊರೆದ ಬ್ಯಾನರ್ಜಿ‌

Advertisement

ನವದೆಹಲಿ/ಕೊಲ್ಕತಾ: ಲೋಕಸಭಾ ಚುನಾವಣೆ ಸಮೀಪಗೊಂಡಿದ್ದು, ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಬ್ಲಾಕ್‌ನಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಸುಲಭವಾಗಿ ಬಗೆಹರಿಯುತ್ತಿಲ್ಲ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಘೋಷಿಸಿದ್ದು, ಪ್ರತಿಪಕ್ಷಗಳ ಏಕತೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಮಮತಾ ಹೇಳಿಕೆ ಬೆನ್ನಲ್ಲೇ, ಪಂಜಾಬ್‌ನಲ್ಲೂ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ಇಂಡಿಯಾ ಬ್ಲಾಕ್‌ಗೆ ಇದರಿಂದ ಹಿನ್ನಡೆಯಾದಂತಾಗಿದೆ. ಪಶ್ಚಿಮ ಬಂಗಾಳಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆ ಗುರುವಾರ ಪ್ರವೇಶಿಸಲಿದ್ದು, ಒಂದು ದಿನ ಮುಂಚಿತವಾಗಿ ಮಮತಾ ತಮ್ಮ ನಿಲುವನ್ನು ಪ್ರಕಟಿಸಿದ್ದಾರೆ. ಸೀಟು ಹಂಚಿಕೆ ಕುರಿತು ಕಾಂಗ್ರೆಸ್‌ನ ಯಾರೊಂದಿಗೂ ಮಾತುಕತೆ ನಡೆಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಬ್ಲಾಕ್‌ನಲ್ಲಿ ಒಟ್ಟು ೨೮ ಪಕ್ಷಗಳಿದ್ದು, ಹಲವು ರಾಜ್ಯಗಳಲ್ಲಿ ಈಗಾಗಲೇ ಅವು ಹೊಂದಾಣಿಕೆ ಮಾಡಿಕೊಂಡಿವೆ. ಇನ್ನು ಕೆಲವು ಸಣ್ಣ ಪುಟ್ಟ ಪಕ್ಷಗಳ ಜೊತೆ ಹೊಂದಾಣಿಕೆ ಕಷ್ಟವಾಗಲಿಕ್ಕಿಲ್ಲ. ಆದರೆ ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಪ್ರಮುಖ ಪ್ರತಿಪಕ್ಷಗಳಾದ ಟಿಎಂಸಿ ಮತ್ತು ಆಪ್ ಹಿಂದೇಟು ಹಾಕುತ್ತಿವೆ.
ಒಟ್ಟು ೪೨ ಲೋಕಸಭಾ ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ೮-೧೦ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಸಿಪಿಎಂ ಕೂಡ ಹಲವು ಸ್ಥಾನಗಳನ್ನು ನಿರೀಕ್ಷಿಸುತ್ತಿದೆ. ಆದರೆ ಕಾಂಗ್ರೆಸ್‌ಗೆ ಕೇವಲ ೨ ಸ್ಥಾನಗಳನ್ನು ನೀಡುವುದಾಗಿ ಟಿಎಂಸಿ ಪಟ್ಟು ಹಿಡಿದಿದೆ.
ಕಾಂಗ್ರೆಸ್ ಯಾತ್ರೆಯಿಂದ ಟಿಎಂಸಿ ದೂರವುಳಿಯುವ ಸಾಧ್ಯತೆ:
ಜ.೨೫ ರಂದು ಪಶ್ಚಿಮ ಬಂಗಾಳ ಪ್ರವೇಶಿಸಲಿರುವ ರಾಹುಲ್ ಗಾಂಧಿ ನೇತೃತ್ವದ ನ್ಯಾಯಯಾತ್ರೆಯಿಂದ ಮಮತಾ ಬ್ಯಾನರ್ಜಿ ಪಕ್ಷ ದೂರವುಳಿಯುವ ಸಾಧ್ಯತೆಯಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್‌ನಿಂದ ಔಪಚಾರಿಕ ಆಹ್ವಾನ ಬಂದಿಲ್ಲ.ಹೀಗಾಗಿ ನಾವು ಪಾಲ್ಗೊಳ್ಳುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಸ್ಪಷ್ಟಪಡಿಸಿದ್ದಾರೆ.