ನಲಪಾಡ್ ವಿರುದ್ಧ ಎಫ್‌ಐಆರ್

Advertisement

ಬೆಂಗಳೂರು: ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ತಡೆದಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ರಸ್ತೆ ಸಂಚಾರ ತಡೆದು ಪಂಜಿನ ಮೆರವಣಿಗೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸೇರಿ ೨೫ ಜನರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಪಂಜಿನ ಮೆರವಣಿಗೆ ನಡೆಸಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಹಿನ್ನೆಲೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದರಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯ ಯಾತ್ರೆಯನ್ನು ಅಸ್ಸಾಂನ ಗುವಾಹಟಿ ಪ್ರವೇಶಿಸದಂತೆ ತಡೆದಿತ್ತು. ಅಲ್ಲಿನ ಸರ್ಕಾರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಏಕಾಎಕಿ ರಸ್ತೆ ತಡೆದಿರುವ ಪರಿಣಾಮ ಟ್ರಾಫಿಕ್‌ಜಾಮ್ ಆಗಿತ್ತು. ಇದರಿಂದ ಕೆಲ ಗಂಟೆಗಳ ಕಾಲ ಸಾರ್ವಜನಿಕ ವಾಹನ ಸವಾರರು ಪರದಾಡಿದರು. ಪಂಜಿನ ಮೆರವಣಿಗೆ ಬದಲಾಗಿ ರಸ್ತೆ ತಡೆದು ತೊಂದರೆಯುಂಟು ಮಾಡಿರುವ ಪರಿಣಾಮ ಕ್ರಮ ಕೈಗೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.