ಬಿಟ್‌ಕಾಯಿನ್: ಮತ್ತಷ್ಟು ಜನರ ಬಂಧನಕ್ಕೆ ಸಿದ್ಧತೆ

Advertisement

ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಇಬ್ಬರು ಪೊಲೀಸ್ ಅಧಿಕಾರಿ­ಗಳ ಮೊಬೈಲ್ ಸಂಭಾಷ­ಣೆಯ ಆಡಿಯೋ ದಾಖ­ಲೆ­­­ಗಳನ್ನು ಸಿಐಡಿಯ ವಿಶೇಷ ತನಿಖಾ ದಳ (ಎಸ್‌ಐಟಿ) ಪತ್ತೆ ಮಾಡಿದೆ ಎನ್ನಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರ ಬಂಧನಕ್ಕೆ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.
ಕಳೆದ ವಾರ ಜಿಸಿಐಟಿ ಟೆಕ್ನಾಲಜಿಸ್ ಕಂಪನಿಯ ಸಿಇಓ ಹಾಗೂ ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ತಮ್ಮ ವಶಕ್ಕೆ ಪಡೆದಿದ್ದರು. ಇಬ್ಬರೂ ಆರೋಪಿಗಳ ಪೊಲೀಸ್ ಕಸ್ಟಡಿ ಬುಧವಾರ ಕೊನೆಗೊಳ್ಳಲಿದೆ. ವಿಚಾರಣೆ ವೇಳೆ ಇಬ್ಬರೂ ಆರೋಪಿಗಳು ನೀಡಿರುವ ಹೇಳಿಕೆಗಳನ್ನು ಆಧರಿಸಿ ಕೆಲವೆಡೆ ಪರಿಶೀಲನೆ ನಡೆಸಿದ ತನಿಖಾ ತಂಡಕ್ಕೆ ಎರಡು ಮೊಬೈಲ್ ಸಂಭಾಷಣೆ ಆಡಿಯೊಗಳು ಲಭ್ಯವಾಗಿವೆ ಎನ್ನಲಾ­ಗಿದೆ. ಆರೋಪಿಗಳು ನೀಡಿದ ಸುಳಿವು ಆಧರಿಸಿ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ ಎಂದೂ ಮೂಲಗಳು ಹೇಳಿವೆ.
ಸದ್ಯ ಎಸ್‌ಐಟಿ ವಶದ­ಲ್ಲಿರುವ ಇಬ್ಬರು ಆರೋಪಿ­ಗಳನ್ನು ಬುಧವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿ­ಸಲಾಗುತ್ತಿದೆ. ಈ ಬಾರಿ ಇಬ್ಬರೂ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲು ಕೋರ್ಟ್ ನಿರಾಕರಿಸಿದರೆ ಮತ್ತಷ್ಟು ಅಧಿಕಾರಿಗಳನ್ನು ತನಿಖಾ ತಂಡ ಬಂಧಿಸಲು ಸಿದ್ಧತೆ ನಡೆಸಿದೆ. ಇಡೀ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೂ ಪ್ರಕರಣದಲ್ಲಿ ಬಂಧನಕ್ಕೊಳಗಾಗುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.