ಏನೂ ಇಲ್ಲದ ನೀರಸ ಬಜೆಟ್

Advertisement

ಯಾವುದೇ ಸ್ಪಷ್ಟತೆ ಇಲ್ಲದ, ಯಾವುದೂ ಹೊಸ ಘೋಷಣೆ ಇಲ್ಲದ, ಮಾಡಿದ ಸಾಲ ತೀರಿಸಲಾಗದ, ಬಡವರು ಬಡವರಾಗಿಯೇ ಉಳಿಯುವಂತಹ, ಕೇವಲ ಉಳ್ಳವರಿಗೆ ಸ್ವಲ್ಪ ಸಹಾಯ ಮಾಡುವ ನೀರಸ ಬಜೆಟ್ ಇದಾಗಿದೆ.
ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲು ಅನೇಕ ಯೋಜನೆಗಳನ್ನು ರೂಪಿಸುವುದು ಆಯವ್ಯಯದ ಮೂಲ ಕಾರ್ಯ ಆದರೆ ಕೇಂದ್ರದ ಈ ಬಜೆಟ್ಟನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ… ಬಾವಿಗೆ ಬಿದ್ದವ ಬದುಕಿಗಾಗಿ ಹೋರಾಡಿ ಎದ್ದು ಬಂದವರನ್ನು ಮತ್ತೆ ಬಾವಿಗೆ ನೂಕುವ ಹಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನ ಬಂದಿಲ್ಲ. ರಸ್ತೆಗಳ ಅಭಿವೃದ್ಧಿ, ಭದ್ರಾ ಮೇಲ್ದಂಡೆ ಯೋಜನೆಗೆ ಇನ್ನೂ ಹಣ ಕೊಟ್ಟಿಲ್ಲ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ. ಕೇಂದ್ರದಿಂದ ಬಂದ ತಂಡವೂ ಅಧ್ಯಯನ ನಡೆಸಿ ವರದಿ ನೀಡಿದೆ. ಆದರೆ ಈವರೆಗೂ ಹಣ ನೀಡಿಲ್ಲ.
ಈ ಬಜೆಟ್‌ನಲ್ಲಿ ಬೇರೆ, ಬೇರೆ ರೂಪದಲ್ಲಿ ಬಡವರಿಗೆ ಸಹಾಯ ಮಾಡುವ ಯೋಜನೆಗಳಿಗೆ ಹಣ ನೀಡಬಹುದಿತ್ತು ಆದರೆ ಅದ್ಯಾವುದೂ ಮಾಡಿಲ್ಲ. ಒಂದರ್ಥದಲ್ಲಿ ಈ ಬಜೆಟ್ ಬಡವರ ಮೇಲೆ ಎಳೆದ ಚಪ್ಪಡಿ ಕಲ್ಲಿನಂತಿದೆ. ಇದು ವಿಕಸಿತ ಬಜೆಟ್ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಯಾವ ಕೋನದಿಂದ ನೋಡಿದರೂ ಇಲ್ಲಿ ವಿಕಾಸ ಎನ್ನುವುದು ಕಾಣುವುದಿಲ್ಲ. ದೇಶದಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉದ್ಯೋಗ ಸೃಷ್ಟಿ ಎನ್ನುವುದು ಕೇವಲ ಅವರ ಭಾಷಣದಲ್ಲಿಯೇ ಇದೆ ಹೊರತು ಕಾರ್ಯರೂಪದಲ್ಲಿ ಇಲ್ಲ. ಯುವಕರು ಕೆಲಸವಿಲ್ಲದೇ ಒದ್ದಾಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಅವರಿಗೆ ಏನು ಸಿಕ್ಕಿದೆ? ದೇಶದ ನೀರಾವರಿ, ಕೃಷಿ, ಆದ್ಯತಾವಲಯ, ಮೂಲಸೌಕರ್ಯಗಳಿಗೆ ಸಿಕ್ಕಿದ್ದಾದರೂ ಏನು? ನಮ್ಮ ರಾಜ್ಯ, ದೇಶದ ಜನರು ಸುಶಿಕ್ಷಿತರು, ತಿಳಿವಳಿಕಸ್ತರು. ಎಲ್ಲವೂ ಅವರಿಗೆ ಅರ್ಥವಾಗುತ್ತದೆ. ಜನರ ಕಿವಿಯ ಮೇಲೆ ಹೂವು ಇಡುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸ್ಪಷ್ಟತೆ ಇಲ್ಲದ ಬಜೆಟ್ ಇದು.

ಯು.ಬಿ.ವೆಂಕಟೇಶ್ | ವಿಧಾನಪರಿಷತ್ ಸದಸ್ಯರು