ಕಾಂಗ್ರೆಸ್‌ನವರು ಮತಕ್ಕಾಗಿ ದೇಶವನ್ನೂ ಮಾರಲು ಹಿಂಜರಿಯುವುದಿಲ್ಲ

ಅರವಿಂದ ಬೆಲ್ಲದ
Advertisement

ಧಾರವಾಡ: ಕಾಂಗ್ರೆಸ್‌ನವರು ಮತಕ್ಕಾಗಿ ದೇಶವನ್ನೂ ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಮತಕ್ಕಾಗಿ ಯಾವುದೇ ಹಂತಕ್ಕೂ ಇಳಿಯಲು ಅವರ ತಯಾರಾಗಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ದೂರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದ ಆಸೆಗೆ ದೇಶ ಬೇರ್ಪಡಿಸುವ ಹೇಳಿಕೆಯನ್ನು ಸಂಸದ ಡಿ.ಕೆ. ಸುರೇಶ ನೀಡಿದ್ದಾರೆ. ಪುರಾಣ ಕಾಲದಿಂದ ನಮ್ಮ ದೇಶವಿದೆ. ಮೊದಲಿನಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಮ್ಮ ದೇಶವಿದೆ. ದಕ್ಷಿಣ ಭಾರತ ರಾಜ್ಯಗಳೇ ಹೆಚ್ಚು ಬೆಳವಣಿಗೆಯಾಗಿವೆ. ಕರ್ನಾಟಕ ಮತ್ತು ತಮಿಳುನಾಡು ದೊಡ್ಡ ಜಿಎಸ್‌ಟಿ ರಾಜ್ಯಗಳು. ದೊಡ್ಡ ಸುಶಿಕ್ಷಿತರ ರಾಜ್ಯ ಕೇರಳ. ವೇಗವಾಗಿ ಅಭಿವೃದ್ಧಿಯಾದ ರಾಜ್ಯಗಳಲ್ಲಿ ತೆಲಂಗಾಣವಿದೆ. ದಕ್ಷಿಣ ಭಾರತ ರಾಜ್ಯಗಳು ಹೆಚ್ಚು ಅಭಿವೃದ್ಧಿ ಆಗಿವೆ. ಜನರನ್ನು ದಾರಿ ತಪ್ಪಿಸುವ ಈ ರೀತಿಯ ಹೇಳಿಕೆಯನ್ನು ಸುರೇಶ ಅವರಿಂದ ನಾನು ನಿರೀಕ್ಷಿಸಿರಲಿಲ್ಲ ಎಂದರು.

ಸಿದ್ದರಾಮಯ್ಯ ಕೂಡ ಇಂತಹ ಕೆಲಸ ಮಾಡಿದರು. ಮೆಟ್ರೋದಲ್ಲಿ ಇಂಗ್ಲಿಷ್ ನಡೆಯುತ್ತದೆ. ಆದರೆ, ಇವರು ಹಿಂದಿ ಬೋರ್ಡ್ ವಿರೋಧಿಸಿದ್ದರು. ಹಿಂದಿ ಹೇರಿಕೆ ಎಂದು ಗದ್ದಲ ಎಬ್ಬಿಸಿದ್ದರು. ನಂದಿನಿ, ಅಮೂಲ್ ಹಾಲಿನ ವಿಷಯ ಎತ್ತಿದ್ದರು. ಮತಕ್ಕಾಗಿ ದೇಶ ಮಾರುವುದಕ್ಕೂ ಹೇಸಿಗೆ ಪಡದವರು ಈ ಕಾಂಗ್ರೆಸ್‌ನವರು. ಡಿ.ಕೆ. ಸುರೇಶ ತಮ್ಮ ತಪ್ಪು ಒಪ್ಪಿ, ಅವರ ಹೇಳಿಕೆಯನ್ನು ವಾಪಸ್ ಪಡೆಯಬೇಕು. ದೇಶದ ಹಿತದೃಷ್ಟಿಯಿಂದ ಇಂತಹ ಹೇಳಿಕೆಗಳು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತಹ ಹೇಳಿಕೆ ನೀಡಬಾರದು. ಖರ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಖರ್ಗೆ ಅವರೇ ಡಿ.ಕೆ. ಸುರೇಶ ಹೇಳಿಕೆ ಸರಿಯಲ್ಲ ಎಂದು ಹೇಳಬೇಕು. ಕೆಲವರು ಈ ಹೇಳಿಕೆಯನ್ನು ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತಾಗಿದೆ. ಒಬ್ಬರು ಹೇಳಿದ್ದನ್ನು ಇನ್ನೊಬ್ಬರು ಹೇಳುತ್ತ ಹೊರಟಿದ್ದಾರೆ ಎಂದರು.

ಎಂಪಿ ಚುನಾವಣೆಗಲ್ಲಿ ಕಾಂಗ್ರೆಸ್ ತಾನು ಗೆಲ್ಲುವುದಿಲ್ಲ ಎಂದು ತನಗೆ ಗ್ಯಾರಂಟಿಯಾಗಿದೆ. ಅದಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯುವ ಮಾತು ಹೇಳುತ್ತಿದ್ದಾರೆ. ಅವರ ಉದ್ದೇಶ ಜನರಿಗೂ ಅರ್ಥವಾಗಿದೆ. ಇನ್ನು ಲಕ್ಷ್ಮಣ ಸವದಿ ಮತ್ತು ಜನಾರ್ಧನ ರೆಡ್ಡಿ ಬಿಜೆಪಿಗೆ ಸೇರುತ್ತಾರೆ ಎಂಬುದನ್ನು ಕಾದು ನೋಡಿ. ದಿನಕಳೆದಂತೆ ಎಲ್ಲವೂ ಗೊತ್ತಾಗುತ್ತದೆ. ಈಗಲೇ ಅದರ ಬಗ್ಗೆ ಮಾತನಾಡುವುದು ಬೇಡ ಎಂದರು.