ಎಸ್ಸೆಸ್ಸೆಲ್ಸಿ ಪರೀಕ್ಷೆ: ಬದಲಾವಣೆಗಳೇನು?

Advertisement

ಈ ಬಾರಿ ಮೂರು ಸಲ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲಗಳು ಇವೆ. ಅಂಕಗಳನ್ನು ಹೇಗೆ ಪರಿಗಣಿಸಲಾಗುತ್ತದೆ?, ಮೂರು ಪರೀಕ್ಷೆಯನ್ನೂ ಬರೆಯಬೇಕೇ?, ಫಲಿತಾಂಶ ಯಾವ ಆಧಾರದಲ್ಲಿ ನೀಡುತ್ತಾರೆ ಎಂಬಿತ್ಯಾದಿ ಗೊಂದಲ ನಿವಾರಣೆಗೆ ಇಲ್ಲಿ ಕೆಲ ಮಾಹಿತಿ ನೀಡಲಾಗಿದೆ. ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ೧ ದಿನಾಂಕ ೨೫-೦೩-೨೦೨೪ ರಿಂದ ೦೬-೦೪-೨೦೨೪ರ ನಡುವೆ ನಡೆಯಲಿದೆ. ವಾರ್ಷಿಕ ಪರೀಕ್ಷೆ ಆರಂಭಕ್ಕೆ ಇನ್ನು ಒಂದೂವರೆ ತಿಂಗಳಷ್ಟೇ ಬಾಕಿ ಇವೆ.
ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಟ್ಟು ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ಇವುಗಳನ್ನು ವಾರ್ಷಿಕ ಪರೀಕ್ಷೆ ೧, ವಾರ್ಷಿಕ ಪರೀಕ್ಷೆ ೨ ಮತ್ತು ವಾರ್ಷಿಕ ಪರೀಕ್ಷೆ ೩ ಎಂದು ಕರೆಯಲಾಗುತ್ತದೆ.
ವಿದ್ಯಾರ್ಥಿಗಳು ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯುವ ಅಗತ್ಯ ಇಲ್ಲ. ವಾರ್ಷಿಕ ಪರೀಕ್ಷೆ ೧ಕ್ಕೆ ಕಾರಣಾಂತರದಿಂದ ಹಾಜರಾಗಲು ಆಗದ ವಿದ್ಯಾರ್ಥಿಗಳು ಪರೀಕ್ಷೆ ೨ ಅಥವಾ ೩ಕ್ಕೆ ಹಾಜರಾಗಬಹುದಾಗಿದೆ. ಆದರೆ ಪರೀಕ್ಷೆ ೧ಕ್ಕೆ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು. ವಿದ್ಯಾರ್ಥಿಗಳು ಸಿದ್ಧತೆಗೆ ಸಮಯ ತೆಗೆದುಕೊಂಡು ಪರೀಕ್ಷೆ ೩ಕ್ಕೆ ಬೇಕಾದರೂ ಹಾಜರಾಗಬಹುದು.
ಒಂದು ವೇಳೆ ವಿದ್ಯಾರ್ಥಿಗಳಿಗೆ ತಾವು ಬರೆದ ಪರೀಕ್ಷೆ ೧ರಲ್ಲಿ ಹೆಚ್ಚು ಅಂಕ ಬರುವ ಆತ್ಮವಿಶ್ವಾಸ ಇಲ್ಲದಿದ್ದರೆ, ಪರೀಕ್ಷೆ ೨ ಮತ್ತು ಪರೀಕ್ಷೆ ಮೂರನ್ನು ಬೇಕಿದ್ದರೂ ಬರೆಯುವ ಅವಕಾಶ ಇದೆ. ವಿದ್ಯಾರ್ಥಿಗಳು ತಾವು ಇಚ್ಚಿಸಿದ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ಆದರೆ ಯಾವುದೇ ಪರೀಕ್ಷೆಗಾದರೂ ಶೇ.೭೫ ಹಾಜರಾತಿ ಕಡ್ಡಾಯ ಮಾಡಲಾಗಿದೆ.

ಪರೀಕ್ಷೆ ೧ರಲ್ಲಿ ಫೇಲ್ ಆಗಿದ್ದರೆ…!
ಪರೀಕ್ಷೆ ೧ರಲ್ಲಿ ಅನುತ್ತೀರ್ಣರಾದರೆ, ಪರೀಕ್ಷೆ ೨ ಅಥವಾ ಪರೀಕ್ಷೆ ೩ ಬರೆಯಬಹುದು. ಪರೀಕ್ಷೆ ೧ರಲ್ಲಿ ಕೆಲ ವಿಷಯಗಳಲ್ಲಿ ಅನುತ್ತೀರ್ಣರಾಗಿ, ಪರೀಕ್ಷೆ ೨/ ೩ರಲ್ಲಿ ಉಳಿದ ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ ಪರೀಕ್ಷೆಯ ಮಾಹೆ ಮತ್ತು ಪರೀಕ್ಷೆಯ ಸಂಖ್ಯೆಯನ್ನು ಅಂಕಪಟ್ಟಿಯಲ್ಲಿ ನಮೂದಿಸಲಾಗುವುದು. ಪರೀಕ್ಷೆ ಒಂದರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆ ಬರೆಯಲು ಪರೀಕ್ಷೆ ೧ ಸೇರಿದಂತೆ ಒಟ್ಟು ೬ ಅವಕಾಶಗಳು ಇರುತ್ತವೆ. ಈ ೬ ಪ್ರಯತ್ನ ಮುಗಿದ ನಂತರ ಖಾಸಗಿ ವಿದ್ಯಾರ್ಥಿಗಳಾಗಿ ನೋಂದಣಿ ಮಾಡಿಕೊಂಡು, ಸದರಿ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಪಠ್ಯಕ್ರಮವನ್ನು ವ್ಯಾಸಂಗ ಮಾಡಿ ಪರೀಕ್ಷೆಗೆ ಹಾಜರಾಗಬಹುದು.
ಪರೀಕ್ಷೆಯಲ್ಲಿನ ಬದಲಾವಣೆಯ ಉದ್ದೇಶ
ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಉಂಟಾಗಿದ್ದ ಕೀಳರಿಮೆಯನ್ನು ನಿವಾರಿಸುವುದು ಈ ಬದಲಾವಣೆಯ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ಒಂದು ಹೆಚ್ಚುವರಿ ಪರೀಕ್ಷೆಯಾಗಿ ಪರೀಕ್ಷೆ ೩ಅನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾತಿ ಪಡೆಯಲು ಅನುಕೂಲ ಮಾಡಿಕೊಡುವುದಾಗಿದೆ.
ಹಿಂದಿನ ವಿದ್ಯಾರ್ಥಿಗಳಿಗೇನು ನಿಯಮ?
೨೦೨೨-೨೩ ಅಥವಾ ಅದಕ್ಕಿಂತ ಹಿಂದಿನ ಸಾಲಿನ ವಿದ್ಯಾರ್ಥಿಗಳು ೨೦೨೩-೨೪ನೇ ಸಾಲಿನ ಪರೀಕ್ಷೆ ೧ಕ್ಕೇ ಹಾಜರಾಗಬೇಕು ಎಂಬ ನಿಯಮ ಇಲ್ಲ. ಯಾವ ಪರೀಕ್ಷೆಯನ್ನಾದರೂ ಅಥವಾ ಮೂರೂ ಪರೀಕ್ಷೆಯನ್ನು ಬರೆಯಬಹುದು.
ಎಲ್ಲಾ ಪರೀಕ್ಷೆಗೂ ಶುಲ್ಕ ಪಾವತಿಸಬೇಕೇ?
ಪರೀಕ್ಷೆ ೧ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಫಲಿತಾಂಶವನ್ನು ಇನ್ನೂ ಉತ್ತಮಪಡಿಸಿಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ತಾವು ಬರೆಯುವ ವಿಷಯದ ಪರೀಕ್ಷೆಗೆ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಿದೆ. ಅಂಕಪಟ್ಟಿಗೆ ಒಂದು ಬಾರಿ ಮಾತ್ರ ನಿಗದಿತ ಶುಲ್ಕ ಪಾವತಿಸಿದರೆ ಸಾಕು.