ಡಿ.ಕೆ.ಸುರೇಶ್ ಹೇಳಿಕೆ: ಸಂಸತ್‌ನಲ್ಲಿ ಮಾರ್ದನಿ

Advertisement

ನವದೆಹಲಿ: ಕೇಂದ್ರದ ಮುಂಗಡಪತ್ರದಲ್ಲಿ ದಕ್ಷಿಣದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿರುವುದರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತದೆ ಎಂಬ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಹೇಳಿಕೆ ವಿವಾದ ಈಗ ಸಂಸತ್ ಅಂಗಳ ಪ್ರವೇಶಿಸಿದೆ. ಈ ವಿಷಯ ಶುಕ್ರವಾರ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಸಂಸದನ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಉಭಯ ಸದನಗಳಲ್ಲಿ ಬಿಜೆಪಿ ಒತ್ತಾಯಿಸಿತು.
ಆದರೆ, ಸಂಸದನ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದ ಅಖಂಡತೆಯನ್ನು ಪಕ್ಷ ಎತ್ತಿಹಿಡಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದನ ಹೇಳಿಕೆಗೆ ಜೋಶಿ ಖಂಡನೆ : ಶುಕ್ರವಾರ ಸಂಸತ್ತಿನ ಬಜೆಟ್ ಅಧಿವೇಶನದ ಕಲಾಪ ಆರಂಭವಾಗುತ್ತಿದ್ದಂತೇ ಶೂನ್ಯವೇಳೆಯಲ್ಲಿ ಡಿ.ಕೆ ಸುರೇಶ್ ಹೇಳಿಕೆ ಖಂಡಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ದಕ್ಷಿಣ ರಾಜ್ಯಗಳನ್ನೊಳಗೊಂಡ ಪ್ರತ್ಯೇಕ ರಾಷ್ಟ್ರಕ್ಕೆ ಕಾಂಗ್ರೆಸ್ ಸಂಸದನ ಒತ್ತಾಯ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‌ಗೆ ಮಾಡಿದ ಅಪಮಾನ. ಸಂಸದರ ಪ್ರಮಾಣವಚನದ ಉಲ್ಲಂಘನೆಯಾಗಿದೆ. ಹೀಗಾಗಿ ಈ ವಿಷಯವನ್ನು ನೀತಿ ನಿರ್ಧಾರಕ ಸಮಿತಿ ವಿಚಾರಣೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ, ಈ ಬಗ್ಗೆ ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು. ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಜೋಶಿ ಹೇಳಿ­ಕೆಯನ್ನು ಆಕ್ಷೇಪಿಸಿ ಲೋಕಸಭೆಯಿಂದ ಹೊರನಡೆದರು. ಈ ಹಂತದಲ್ಲಿ ಡಿ.ಕೆ ಸುರೇಶ್ ಹೇಳಿಕೆಗೆ ಕಾಂಗ್ರೆಸ್ ಬದ್ಧವಾಗಿದೆಯೇ ಎಂಬುದನ್ನು ಪಕ್ಷ ಸ್ಪಷ್ಟಪಡಿಸಬೇಕು ಎಂದೂ ಪ್ರಹ್ಲಾದ ಜೋಶಿ ಪಟ್ಟುಹಿಡಿದರು. ನಂತರ ಪ್ರತಿಪಕ್ಷಗಳ ಸದಸ್ಯರು ಸದನಕ್ಕೆ ವಾಪಸಾಗಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು.