ಇಂದು ಗೋವಾಕ್ಕೆ ಪ್ರಧಾನಿ

Advertisement

ಪಣಜಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಫೆ.೬ ರಂದು ದಕ್ಷಿಣ ಗೋವಾದ ಮಡಗಾಂವಗೆ ಆಗಮಿಸಿ ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ನಾಯಿ, ಹಸುಗಳನ್ನು ರಸ್ತೆಗೆ ಬಿಡದಂತೆ ಸರ್ಕಾರ ಅವರು ಸಂಚರಿಸುವ ಮಾರ್ಗದ ರಾಷ್ಟ್ರೀಯ ಹೆದ್ದಾರಿ ೧೭ರ ವ್ಯಾಪ್ತಿಯಲ್ಲಿ ಬರುವ ಗ್ರಾಪಂಗಳಿಗೆ ಸೂಚಿಸಿದೆ.
ಮೋದಿ ಅವರ ಬೆಂಗಾವಲು ಪಡೆ ನುವೆಯಿಂದ ಬೆತುಲ್‌ಗೆ ಪ್ರಯಾಣಿಸಿ ಅದೇ ಮಾರ್ಗವಾಗಿ ಹಿಂತಿರುಗಲಿದೆ. ಪ್ರಧಾನಿ ಫೆಬ್ರವರಿ ೬ರಂದು ಬೆಳಿಗ್ಗೆ ೧೦.೩೦ಕ್ಕೆ ಒಎನ್‌ಜಿಸಿ ಸರ್ವೈವಲ್ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ೧೦.೪೫ಕ್ಕೆ ಇಂಡಿಯಾ ಎನರ್ಜಿ ವೀಕ್ ೨೦೨೪ ಅನ್ನು ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ ೨.೪೫ಕ್ಕೆ ಡೆವಲಪ್ ಇಂಡಿಯಾ, ಡೆವಲಪ್ ಗೋವಾ ೨೦೪೭ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗೋವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರು ೧೩೩೦ ಕೋಟಿ ರೂ. ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಡಗಾಂವ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.