ಸಿಎಂ ಕಾರಿಗೆ ಅಡ್ಡಹಾಕಲು ಯತ್ನ: ಹಲವರು ಪೊಲೀಸ್ ವಶಕ್ಕೆ

Advertisement

ಮಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಮಾನ ನಿಲ್ದಾಣದ ಮೂಲಕ ಕಾಂಗ್ರೆಸ್ ಸಮಾವೇಶದತ್ತ ಬರುವ ವೇಳೆ ಕಾರಿಗೆ ಅಡ್ಡಹಾಕಲು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಯತ್ನಿಸಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಸಮಾವೇಶ ನಡೆಯುವ ಸಹ್ಯಾದ್ರಿ ಮೈದಾನಕ್ಕೆ ಬರುವ ವೇಳೆ ಮುತ್ತಿಗೆ ಹಾಕಲು ಬೊಂದೆಲ್ ಬಳಿ ಕಾರ್ಯಕರ್ತರು ಸೇರಿದ್ದರು. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ರಸ್ತೆಯಲ್ಲಿ ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಪೊಲೀಸರು ಸೇರಿದ್ದು ಕಾರ್ಯಕರ್ತರನ್ನು ಜಾಗ ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಬಳಿಕ ಏರ್ಪೋಟ್‌ನಲ್ಲಿದ್ದ ಕಮಿಷನ‌ರ್ ಅನುಪಮ್ ಅಗರ್ವಾಲ್ ಕೂಡ ಸ್ಥಳಕ್ಕೆ ಆಗಮಿಸಿದ್ದು ಕೂಡಲೇ ಜಾಗ ಖಾಲಿ ಮಾಡಲು ಹೇಳಿದ್ದಾರೆ.
ಈ ವೇಳೆ, ಬಿಜೆಪಿ ಕಾರ್ಯಕರ್ತರು ಕಮಿಷನ‌ರ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಶಾಸಕರ ವಿರುದ್ದ ಎಫ್ ಐಆ‌ರ್ ದಾಖಲಿಸಿರುವ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದರೂ, ಬಿಡಲಿಲ್ಲ. ಕಾಂಗ್ರೆಸಿಗೆ ಧಿಕ್ಕಾರ ಕೂಗುತ್ತಿದ್ದಾಗಲೇ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದಿದ್ದು ಕೆಲವು ಯುವಕರು ನೆಲದಲ್ಲಿ ಹೊರಳಾಡಿದ್ದಾರೆ. ಬಳಿಕ ಎಲ್ಲರನ್ನೂ ಪೊಲೀಸ್‌ರು ಬಸ್ಸಿಗೆ ತುಂಬಿಸಿದ್ದಾರೆ.
ಮುಖ್ಯಮಂತ್ರಿ ಕಾರು ಬರೋ ಮೊದಲೇ ಜಾಗ ಖಾಲಿ ಮಾಡಿಸಿದ್ದು ಪೊಲೀಸರು ಸೇಫ್ ಆಗಿದ್ದಾರೆ. ಕಮಿಷನ‌ರ್ ಅನುಪಮ್ ಅಗರ್ವಾಲ್ ತುರ್ತಾಗಿ ಬಂದು ಕ್ರಮ ಜರುಗಿಸಿದ್ದಾರೆ.