ಅಕ್ಕ ಕೆಫೆ ಲೋಗೋ ಅನಾವರಣ

Advertisement

ಬೆಂಗಳೂರು: ವಿಕಾಸ ಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ನಮ್ಮ ಸರಸ್ ಮೇಳ 2024 ಹಾಗೂ ಅಕ್ಕ ಕೆಫೆ ಲೋಗೋವನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಸರಸ್ ಎಂದರೆ ಸ್ವಸಹಾಯ ಗುಂಪುಗಳ ಒಂದು ಕುಂಭಮೇಳವಿದ್ದಂತೆ. ಇಂದು ಕುಶಲಕರ್ಮಿಗಳು ಒಂದೆಡೆ ಸೇರಿ ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶನ ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಭಾರತದ ಆರ್ಥಿಕತೆಯ ಬೆಳವಣಿಗೆ ಗುಡಿ ಕೈಗಾರಿಕೆಗಳಲ್ಲಿದೆ ಎನ್ನುವ ಮಹಾತ್ಮ ಗಾಂಧೀಜಿ ಅವರ ಮಾತು ಅಕ್ಷರಶಃ ನಿಜ. ಭಾರತದಲ್ಲಿ ಅದೆಷ್ಟೋ ಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆಗಳಿವೆ. ಇವುಗಳು ಅನೇಕ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುವುದರ ಜೊತೆಗೆ ದೇಶದ ಆರ್ಥಿಕತೆಗೂ ಕೂಡ ತನ್ನ ಕೊಡುಗೆಯನ್ನು ನೀಡುತ್ತಿವೆ. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುತ್ತಿವೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶದ ಹಲವಾರು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸುತ್ತಿದ್ದು, ನಮ್ಮ ಸರ್ಕಾರ ಸಣ್ಣ ಮತ್ತು ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದ್ದಾರೆ.