ದಿವಾಳಿ ಸರ್ಕಾರದಿಂದ ದೇವಸ್ಥಾನದ ದುಡ್ಡು ಹೊಡೆಯಲು ಬಿಡಲ್ಲ

ಜೋಶಿ
Advertisement

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಅಕ್ಷರಶಃ ದಿವಾಳಿಯಾಗಿದೆ. ದುಡ್ಡು ಇಲ್ಲದ ಕಾರಣಕ್ಕಾಗಿ ದೇವಾಲಯಗಳ ಹುಂಡಿಗಳ ಮೇಲೆ ಕಣ್ಣು, ಕೈ ಹಾಕಿದೆ. ನಮ್ಮ ಪಕ್ಷ ಈ ಧೋರಣೆಯನ್ನು ಖಂಡಿಸುತ್ತದೆ, ಪ್ರತಿಭಟನೆ ಮಾಡುತ್ತದೆ.
ಅಷ್ಟೇ ಅಲ್ಲ ಜನಜಾಗೃತಿಯನ್ನೂ ಮೂಡಿಸಲಿದೆ. ಮುಖ್ಯಮಂತ್ರಿಗಳಿಗೆ ತಾಕತ್ತಿದ್ದರೆ ಚರ್ಚ್, ಮಸೀದಿಗಳಿಂದ ಶೇ. ೧೦ರಷ್ಟು ಹಣ ಪಡೆಯಲಿ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ವಕ್ಫ್ ಹೆಸರಲ್ಲಿ ನೂರಾರು ಎಕರೆ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ತಡೆಯುವ ತಾಕತ್ತು ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಮನಸ್ಥಿತಿ ಕೆಲವರಲ್ಲಿದೆ. ಹೀಗಾಗಿ ಇಂತಹ ಕೃತ್ಯಕ್ಕೆ ಆಸ್ಪದವಾಗಿದೆ. ಅಲ್ಲದೇ ರಾಜ್ಯ ಸರ್ಕಾರವೂ ಕೂಡಾ ತಾನು ಹಿಂದೂ ವಿರೋಧಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ರುಜುವಾತು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮದೇನೂ ಷಡ್ಯಂತ್ರ ಇಲ್ಲ
ನಮ್ಮದೇನೂ ಷಡ್ಯಂತ್ರ ಇಲ್ಲ. ಅವರವರೇ ಐಎನ್‌ಡಿಐಎ ಕೂಟ ಬಿಟ್ಟು ಬರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಅನಾಚಾರ, ದೌರ್ಜನ್ಯ ಎದುರಿಸುತ್ತಿರುವುದು ನಾವು. ಮಮತಾ ಬ್ಯಾನರ್ಜಿಗೆ ಕಾಂಗ್ರೆಸ್‌ನವರಿಗೆ ಏನು ಜಗಳ ಆಗಿದೆಯೊ ಗೊತ್ತಿಲ್ಲ. ರಾಹುಲ್ ಗಾಂಧಿಗೆ ಪ್ರಬುದ್ಧರಲ್ಲ. ಹೀಗಾಗಿ, ಅವರನ್ನು ನಂಬಿ ಐಎನ್‌ಡಿಐಎ ಕೂಟದಿಂದ ಹಿಂದೆ ಸರಿಯುತ್ತಿದ್ದಾರೆ. ಈ ಕೂಟದಿಂದ ಏನೂ ಆಗಲ್ಲ. ನಾನು ಹಿಂದೆಯೇ ಹೇಳಿದ್ದೆ. ಬರೀ ಚಹಾ ಪಾರ್ಟಿ, ಪೋಟೋ ಶೂಟ್ ಆಗುತ್ತದೆ ಎಂದು. ಹಾಗೆಯೇ ಆಗುತ್ತಿದೆ ಎಂದು ಜೋಶಿ ಹೇಳಿದರು.

ದುಷ್ಕರ್ಮಿಗಳನ್ನು ಒದ್ದು ಒಳಗೆ ಹಾಕಲಿ
ಅಯೋಧ್ಯೆಗೆ ಹೊರಟ ಯಾತ್ರಿಗಳಿಗೆ ಹೊಸಪೇಟೆಯಲ್ಲಿ ಬೆದರಿಕೆ ಹಾಕಿದ ದುಷ್ಕರ್ಮಿಗಳನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.