ಅಯೋಧ್ಯೆ ರೈಲಿಗೆ ಬೆಂಕಿ ಹಚ್ಚುವದಾಗಿ ಬೆದರಿಕೆ: ಓರ್ವನ ವಶಕ್ಕೆ ಪಡೆದ ಪೊಲೀಸರು

Advertisement

ಹೊಸಪೇಟೆ: ಅನ್ಯಕೋಮಿನ ಯುವಕನೋರ್ವ ಆಕ್ಷೇಪಾರ್ಹ ಪದ ಬಳಸಿದ್ದಲ್ಲದೇ ರೈಲಿಗೆ ಬೆಂಕಿ ಹಚ್ಚುವದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಯೋಧ್ಯೆ ಧಾಮ-ಮೈಸೂರು ರೈಲಿನಲ್ಲಿನ ಪ್ರಯಾಣಿಕರು ಇಲ್ಲಿನ ರೈಲು ನಿಲ್ದಾಣದಲ್ಲಿ ರೈಲು ತಡೆದು ಪ್ರತಿಭಟಿಸಿದ ಘಟನೆ ಕಳೆದ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಗದಗ ಬಳಿ ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆಗೊಳಪಡಿಸಿದ್ದಾರೆ. ಉಳಿದ ಕೆಲವರು ಪರಾರಿಯಾಗಿದ್ದಾರೆ.
ಅಯೋಧ್ಯೆ ಧಾಮ-ಮೈಸೂರು ರೈಲು ಹೊಸಪೇಟೆ ನಿಲ್ದಾಣಕ್ಕೆ ಆಗಮಿಸುವ ವೇಳೆ ಅನ್ಯಕೋಮಿನ ಯುವಕ ಖಂಡನೀಯ ಪದ ಬಳಕೆ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಕುಪಿತಗೊಂಡ ಪ್ರಯಾಣಿಕರು ಪದೇ ಪದೇ ಚೈನ್ ಎಳೆದರೆಂದೂ ವರದಿಯಾಗಿದೆ. ನಿಲ್ದಾಣದಲ್ಲಿ ರೈಲಿನಿಂದ ಕೆಳೆಗೆ ಇಳಿದು ಪ್ರತಿಭಟಿಸಿದ್ದಾರೆ.
ವಿಷಯ ತಿಳಿಯುತ್ತಲೇ ವಿಜಯನಗರ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರನ್ನು ಮನವೊಲಿಸಿದ ಬಳಿಕ ರೈಲು ಮುಂದೆ ಚಲಿಸಿತು. ಇದರಿಂದ ಎರಡು ತಾಸು ರೈಲು ಸಂಚಾರ ವಿಳಂಬವಾಗಿದೆ.
ರೈಲು ಚಲಿಸಲು ಆರಂಭಿಸುತ್ತಿದ್ದಂತೆ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಬೋಗಿಗಳ ಜತೆ ಪ್ರಯಾಣ ಬೆಳೆಸಿದರು.