ಶೀಘ್ರ ಬರಲಿದೆ ಎಕ್ಸ್ ಮೇಲ್

Advertisement

ನ್ಯೂಯಾರ್ಕ್: ಜಿಮೇಲ್ ಸೇವೆ ಆಗಸ್ಟ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ ಎಂಬ ವದಂತಿ ಹರಡಿರುವ ನಡುವೆಯೇ ಎಕ್ಸ್ ತಾಣದ ಮುಖ್ಯಸ್ಥ ಎಲಾನ್ ಮಸ್ಕ್ ಅವರು, ಜಿಮೇಲ್‌ಗೆ ಪರ್ಯಾಯವಾಗಿ ಎಕ್ಸ್‌ ಮೇಲ್ ಆರಂಭಿಸುವ ಸೂಚನೆ ನೀಡಿದ್ದಾರೆ. ಎಕ್ಸ್ ಇಂಜಿನಿಯರ್ ಹಾಗೂ ಭದ್ರತಾ ತಂಡದ ಸದಸ್ಯ ನೇಟ್ ಮೆಕ್ಸ್ಗ್ರಾಡಿ ತಮ್ಮ ತಾಣದಲ್ಲಿಯೇ ಎಕ್ಸ್‌ ಮೇಲ್ ಯಾವಾಗ ಆರಂಭವಾಗುವುದೆಂದು ಕೇಳಿದ ಪ್ರಶ್ನೆಗೆ ಶೀಘ್ರದಲ್ಲೇ ಆರಂಭವಾಗುವುದೆಂದು ಮಸ್ಕ್ ಉತ್ತರಿಸಿದ್ದಾರೆ. ಹೀಗಾಗಿ ಎಕ್ಸ್ ಮೇಲ್ ಅಸ್ತಿತ್ವಕ್ಕೆ ಬರುವ ಸುಳಿವು ಖಚಿತವಾಗಿದೆ.
ಆದರೆ ಜಿ ಮೇಲ್ ಅಂತ್ಯದ ಸುದ್ದಿ ದೃಢವಲ್ಲದ್ದು, ಅದೊಂದು ನಕಲಿ ಸುದ್ದಿ. ಜಿಮೇಲ್ ಸೇವೆ ಮುಂದುವರಿಯುವುದೆಂದು ಗೂಗಲ್ ಸಂಸ್ಥೆ ದೃಢಪಡಿಸಿದೆ.
ಇತ್ತೀಚೆಗೆ ಎಕ್ಸ್ ತಾಣದಲ್ಲಿ ಗೂಗಲ್ ಈಸ್ ಸನ್‌ಸೆಟ್ಟಿಂಗ್ ಜಿಮೇಲ್ ಎನ್ನುವ ಶೀರ್ಷಿಕೆಯಡಿ ಜಿಮೇಲ್ ಸ್ಥಗಿತಗೊಳ್ಳಲಿದೆ ಎಂಬ ಸಂದೇಶ ಜಗತ್ತಿನಾದ್ಯಂತ ತ್ವರಿತವಾಗಿ ಹರಿದಾಡಿದ ನಂತರ ಜಿಮೇಲ್ ಬಳಕೆದಾರರು ಆತಂಕಗೊಂಡಿದ್ದರು.
ಆದರೆ ಗೂಗಲ್ ಕಂಪನಿಯು ಹಾಲಿ ವರ್ಷದಲ್ಲಿ ಜಿಮೇಲ್ ಸೇವೆಯ ತಂತ್ರಜ್ಞಾನದಲ್ಲಿ ತುಸು ಮಾರ್ಪಾಡು ಮಾಡುತ್ತಿದೆ. ಜಿಮೇಲ್‌ನ ಬೇಸಿಕ್ ಎಚ್‌ಟಿಎಂಎಲ್ ವ್ಯೂವ್ ಅನ್ನು ಕೊನೆಗೊಳಿಸುತ್ತಿರುವುದರಿಂದ ಬಳಕೆದಾರರು ಸ್ಟಾಂಡರ್ಡ್ ವ್ಯೂವ್‌ಗೆ ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಗೂಗಲ್ ವಿವರಿಸಿದೆ.