ನಿರಾಣಿಗೆ ಶೆಟ್ಟರ ಬಿರುಸಾದ ಚಾಟಿ

ಜಗದೀಶ್ ಶೆಟ್ಟರ್
Advertisement

ಹುಬ್ಬಳ್ಳಿ: ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಣೆ ಮಾಡಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೋಮವಾರ ಇಲ್ಲಿ ಪರೋಕ್ಷ ವಾಗ್ದಾಳಿ ನಡೆಸಿ ಈಗಿರುವ ವಿಮಾನ ನಿಲ್ದಾಣಗಳನ್ನೇ ಸರಿಯಾಗಿ ಬಳಕೆ ಮಾಡುವ ಬಗ್ಗೆ ಆಲೋಚಿಸದೇ, ಪ್ರಚಾರಕ್ಕಾಗಿ ಮಾತನಾಡಬಾರದು ಎಂದು ಚಾಟಿ ಬೀಸಿದರು.
ಬೆಂಗಳೂರಿನ ಹೊರಗೆ ಡಿಜಿಟಲ್ ಕ್ರಾಂತಿಯನ್ನು ತರುವ ದಿಸೆಯಲ್ಲಿ ನಡೆದ ಟೆಕ್ಸಲರೇಟ್' ಸಮಾವೇಶದಲ್ಲಿ ಮಾತನಾಡಿದ ಶೆಟ್ಟರ, ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಎದುರೇ ನಿರಾಣಿ ನಡೆಯನ್ನು ಆಕ್ಷೇಪಿಸಿದರು. ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಎರಡು ದೊಡ್ಡ ವಿಮಾನ ನಿಲ್ದಾಣಗಳಿವೆ. ಇವುಗಳಿಗೆ ಮೋದಿಯವರು ಪ್ರಧಾನಿಯಾಗಿ ಉಡಾನ್ ಯೋಜನೆ ಅನುಷ್ಟಾನ ಮಾಡಿದ ನಂತರವಷ್ಟೇ ಜೀವ ಬಂದಿದೆ. ಇವುಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕೇ ವಿನಾ, ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾತನಾಡುವುದು ಅಪ್ರಾಯೋಗಿಕ’ ಎಂದು ಶೆಟ್ಟರ ಅಭಿಪ್ರಾಯಪಟ್ಟರು.
`ಇಷ್ಟಕ್ಕೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿಬಿಟ್ಟ ಮಾತ್ರಕ್ಕೆ ಬರುವವರು ಯಾರು? ಪ್ರಯಾಣಿಕರು ಎಲ್ಲಿದ್ದಾರೆ? ಅಂತಾರಾಷ್ಟ್ರೀಯ ಪ್ರಯಾಣಿಕರ ಓಡಾಟ ಈ ಭಾಗಕ್ಕೆ ಎಷ್ಟು ಪ್ರಮಾಣದಲ್ಲಿದೆ? ಇವ್ಯಾವುಗಳನ್ನೂ ಆಲೋಚಿಸದೇ ಏನೋ ಪ್ರಚಾರಕ್ಕಾಗಿ ಇಂತಹ ಘೋಷಣೆಗಳನ್ನು ಮಾಡಬಾರದು’ ಎಂದು ಸ್ವಪಕ್ಷೀಯ ಸಚಿವರ ಕಿವಿ ಹಿಂಡಿದರು. ಹೋಗಲಿ. ಈ ಸಂಬಂಧ ಅಧ್ಯಯನಕ್ಕೆ ಒಂದು ತಂಡವನ್ನಾದರೂ ನೇಮಕ ಮಾಡಿರುವಿರಾ? ಎಂದು ಪ್ರಶ್ನಿಸಿದರು.