ಶಾಸನಸಭೆಗೆ ಜಗಳಗಂಟಿತನ ಸಲ್ಲ

Advertisement

ಶಾಸನಸಭೆಗಳ ಪ್ರಧಾನ ಕರ್ತವ್ಯ ಜನಕಲ್ಯಾಣದ ಜೊತೆಗೆ ರಾಜ್ಯದ ಸರ್ವತೋಮುಖ ಪ್ರಗತಿಗೆ ಪೂರಕವಾಗುವ ರೀತಿಯಲ್ಲಿ ಆಡಳಿತ ಯಂತ್ರವನ್ನು ಸಜ್ಜುಗೊಳಿಸಿ ಜನಾದೇಶದ ಆಶಯಗಳು ಕಾರ್ಯರೂಪಕ್ಕೆ ಬರುವಂತೆ ಮಾಡುವುದು. ಮಾತಿನ ಕೌಶಲ್ಯದ ಮೂಲಕ ರಾಜ್ಯದ ಸಂಕಟಗಳು-ಸವಾಲುಗಳ ಸಾಲಿನಲ್ಲಿ ಪರಿಹಾರವನ್ನು ರೂಪಿಸಿಕೊಳ್ಳುತ್ತಲೇ ಜನರ ಬದುಕನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಶಾಸನಗಳನ್ನು ರೂಪಿಸಿ ಅವುಗಳನ್ನು ಜಾರಿ ಮಾಡುವುದು ಕೂಡಾ ಶಾಸನಸಭೆಯ ಕರ್ತವ್ಯ. ಇಷ್ಟೂ ಕರ್ತವ್ಯಗಳ ಪಾಲನೆಗೆ ನಿರ್ಣಾಯಕವಾಗುವುದು ಗಟ್ಟಿಯಾದ, ಜನಪರವಾಗಿರುವ, ದೂರದರ್ಶಿತ್ವದ ಶಾಸನ ರಚನೆ. ಹೀಗಾಗಿ ಇದೂ ಕೂಡಾ ಪ್ರಧಾನ ಕರ್ತವ್ಯ ಎನ್ನುವುದಕ್ಕಿಂತ ಪ್ರಧಾನ ಜವಾಬ್ದಾರಿ ಎಂದು ಗುರುತಿಸುವುದು ಸೂಕ್ತ. ಇಂತಹ ಶಾಸನಸಭೆಗಳಲ್ಲಿ ಆಡುವ ಮಾತು ಮತ್ತು ನಡೆದುಕೊಳ್ಳುವ ರೀತಿ ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕೆ ವಿನಃ ಬದಲಿಗೆ ತದ್ವಿರುದ್ಧವಾಗಿರಬಾರದು ಎಂಬುದು ಜನರ ಸಾರ್ವತ್ರಿಕ ನಿರೀಕ್ಷೆ. ಕರ್ನಾಟಕದ ಶಾಸನಸಭೆ ಈ ವಿಚಾರದಲ್ಲಿ ಮೊದಲಿನಿಂದಲೂ ಇಂತಹ ಭವ್ಯ ಪರಂಪರೆ ಸ್ಥಾಪಿಸಿಕೊಳ್ಳುತ್ತಲೇ ಹೊಸ ಸಂವೇದನಗಳ ಮೂಲಕ ಕಾಲಕ್ಕೆ ಅನುಗುಣವಾಗಿ ನಿಯಮಾವಳಿಗಳನ್ನು ರಚಿಸಿಕೊಂಡು ಸದನದ ಕಲಾಪಕ್ಕೆ ಮೆರುಗು ಬರುವಂತೆ ಮಾಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಆದರೆ, ಕೆಲವು ಸಂದರ್ಭಗಳಲ್ಲಿ ಜರುಗುವ ಘಟನಾವಳಿಗಳು ಕನ್ನಡಿಗರಿಗೆ ಹೆಮ್ಮೆ ತರುವ ಬದಲು ಒಂದು ರೀತಿಯಲ್ಲಿ ಸಾತ್ವಿಕ ಸಿಟ್ಟನ್ನು ತಂದುಕೊಡುವ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಲಾರದು. ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ವಿಧಾನಸೌಧದ ಮೊಗಸಾಲೆಯಲ್ಲಿ ಜರುಗಿದೆ ಎನ್ನಲಾದ ಘೋಷಣೆ ಕೂಗಿದ ಪ್ರಕರಣದ ಬೆಳವಣಿಗೆ ಶಾಸಕರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಒಂದು ರೀತಿಯಲ್ಲಿ ತಲೆ ತಗ್ಗಿಸುವಂತಿದೆ. ಇಷ್ಟಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದರೋ ಅಥವಾ ಇಲ್ಲವೋ ಎಂಬುದು ಇದುವರೆಗೆ ಖಚಿತವಾಗಿಲ್ಲ. ಬಿಜೆಪಿಯವರು ನೇರವಾಗಿ ಆರೋಪಿಸುವಂತೆ ರಾಜ್ಯಸಭೆ ಚುನಾವಣೆಯ ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದರು. ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಆರೋಪವನ್ನು ನಿರಾಕರಿಸಿ `ಅವರು ಕೂಗಿದ್ದು ನಾಸಿರ್ ಹುಸೇನ್ ಜಿಂದಾಬಾದ್’ ಎಂದು ಮಾತ್ರ ಎಂದು ಸ್ಪಷ್ಟಪಡಿಸಿರುವ ಪರಿಣಾಮವಾಗಿ ಎರಡೂ ಪಕ್ಷಗಳ ನಡುವೆ ಕುರುಕ್ಷೇತ್ರ ಕಾಳಗದ ರೀತಿಯ ಬೆಳವಣಿಗೆ ಆರಂಭವಾಗಿರುವುದು ಕರ್ನಾಟಕದ ಮಟ್ಟಿಗೆ ಶುಭ ಸೂಚನೆಯಲ್ಲ.
ನಿಜ. ದೇಶಭಕ್ತಿಯ ವಿಚಾರದ ಬಗ್ಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದು ಅನಗತ್ಯ ಹಾಗೂ ಅನಪೇಕ್ಷಿತ. ದೇಶದ್ರೋಹದ ಕೃತ್ಯದ ಬಗ್ಗೆಯೂ ಯಾವುದೇ ರೀತಿಯ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇಬೇಕು. ಆದರೆ, ಯಾವುದೇ ಕ್ರಮ ಆಗಬೇಕಾದರೂ ಜರುಗಿದೆ ಎಂಬ ಘಟನೆಯ ಸತ್ಯಾಸತ್ಯತೆ ಮೊದಲು ಖಚಿತವಾಗಬೇಕು. ಪೊಲೀಸರು ಈ ವಿಚಾರದಲ್ಲಿ ಇನ್ನೂ ಖಚಿತ ರೂಪದಲ್ಲಿ ಏನನ್ನೂ ಹೇಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್, ಕಾನೂನು ಮಂತ್ರಿ ಎಚ್.ಕೆ. ಪಾಟೀಲ್ ಸೇರಿದಂತೆ ಹಲವರು ಮಂತ್ರಿಗಳು ಹೇಳುವುದು ಇಂತಹ ಘಟನೆ ಜರುಗಿರುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಘಟನೆಗೆ ಸಂಬಂಧಿಸಿದ ವಿಡಿಯೋ ದೃಶ್ಯಾವಳಿಯನ್ನು ಎಫ್‌ಎಸ್‌ಎಲ್‌ಗೆ ವಹಿಸಲಾಗಿದೆ. ವರದಿ ಬಂದ ನಂತರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳುವುದು ಎಂಬ ವಿವರಣೆಯನ್ನು ಬಿಜೆಪಿ ಹಾಗೂ ಮಿತ್ರ ಪಕ್ಷ ಜೆಡಿಎಸ್ ಒಪ್ಪುತ್ತಿಲ್ಲ. ಈ ಬೆಳವಣಿಗೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿಭಟನಾ ಪ್ರದರ್ಶನಗಳಿಗೆ ಪ್ರೇರಣೆ ನೀಡಿರುವ ಪರಿಣಾಮವಾಗಿ ಹೊಸ ರಾಜಕೀಯ ಬಿಕ್ಕಟ್ಟು ಲೋಕಸಭೆ ಚುನಾವಣೆಯ ಮುನ್ನಾ ದಿನಗಳಲ್ಲಿ ಸೃಷ್ಟಿಯಾಗುವ ಲಕ್ಷಣಗಳು ದಟ್ಟವಾಗಿ ಕಂಡುಬರುತ್ತಿದೆ. ಹೀಗಾಗಿ ಇಂತಹ ಪ್ರಕರಣಗಳ ಬಗ್ಗೆ ಖಚಿತ ತನಿಖೆಯನ್ನು ಮುಗಿಸಿ ಸತ್ಯಾಸತ್ಯತೆಯನ್ನು ಮನಗಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರ ವಿಳಂಬವಿಲ್ಲದೆ ಮಾಡಬೇಕಾದ ಕೆಲಸ.
ಘೋಷಣೆಗಳು ಕೂಗುವುದು ರಾಜಕಾರಣದಲ್ಲಿ ಸ್ವಾಭಾವಿಕ. ಆದರೆ, ವೈರಿ ದೇಶವನ್ನು ಸ್ತುತಿಸುವ ಘೋಷಣೆ ಕೂಗುವುದು ದೇಶದ್ರೋಹದ ವ್ಯಾಪ್ತಿಗೇ ಬರುತ್ತದೆ. ಹೀಗಾಗಿ ಇಂತಹ ವಿಚಾರಗಳ ಬಗ್ಗೆ ಕೂದಲು ಸೀಳುವ ವಾದ ವಿವಾದಗಳಿಗೆ ಅವಕಾಶ ಕೊಡದೆ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಮನವಿಟ್ಟು ಶಾಸನಸಭೆಯಲ್ಲಿ ಚರ್ಚೆಯಾದರೆ ನಿಜಕ್ಕೂ ಅದೊಂದು ಸ್ವಾಗತಾರ್ಹ ವಿಚಾರ. ವಿಧಾನಪರಿಷತ್ತಿನಲ್ಲಿ ಜರುಗಿದ ಮಾತಿನ ಚಕಮಕಿಯಲ್ಲಿ ಏಕವಚನಗಳು ಪ್ರಯೋಗವಾದದ್ದು ಯಾವುದೇ ದೃಷ್ಟಿಕೋನದಿಂದ ನೋಡಿದರೂ ಸಮರ್ಥನೀಯವಲ್ಲ. ಕರ್ನಾಟಕದ ಶಾಸನಸಭೆಯ ಭವ್ಯಪರಂಪರೆಯನ್ನು ರಕ್ಷಿಸುವುದು ಎಲ್ಲ ಶಾಸಕರ ಜವಾಬ್ದಾರಿಯಷ್ಟೆ ಅಲ್ಲ ಕರ್ತವ್ಯವೂ ಕೂಡಾ. ಇಂತಹ ಮಾರಾಮಾರಿ ಸ್ವರೂಪದ ಘಟನೆಗಳು ಜರುಗುತ್ತಲೇ ಇದ್ದರೆ ಮುಂದೊಂದು ದಿನ ಕರ್ನಾಟಕದ ಶಾಸನಸಭೆ ಬೇರೆ ರಾಜ್ಯಗಳ ಶಾಸನಸಭೆಗಳನ್ನು ಗುರುತಿಸುವಂತೆ ಜಗಳಗಂಟಿ ಶಾಸನಸಭೆ ಎಂಬ ಹಣೆಪಟ್ಟಿಯನ್ನು ಮೆತ್ತಿಸಿಕೊಳ್ಳಬೇಕಾದ ಅಸಹನೀಯ ಪರಿಸ್ಥಿತಿಗೆ ಆಹ್ವಾನಕೊಟ್ಟಂತಾಗುತ್ತದೆ.