ಗದ್ದಲದಲ್ಲೇ ಅಧಿವೇಶನಕ್ಕೆ ತೆರೆ

Advertisement

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಸದಸ್ಯರು ಎರಡೂ ಸದನಗಳಲ್ಲಿ ಗುರುವಾರ ಧರಣಿ ನಡೆಸಿದರು.
ಗದ್ದಲ, ಗೊಂದಲಗಳ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಗಡಪತ್ರದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಪ್ರತಿಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿದರು. ನಂತರ ವಿಧಾನಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ದೂರು ನೀಡಲು ರಾಜಭವನಕ್ಕೆ ತೆರಳಿದರು.
ಬೆಳಗ್ಗೆ ಸದನ ಸೇರುತ್ತಿದ್ದಂತೇ ಭಾರತ್ ಮಾತಾ ಕಿ ಜೈ' ಎಂದು ಘೋಷಣೆಗಳನ್ನು ಕೂಗುತ್ತ ವಿಧಾನಸಭೆ ಪ್ರವೇಶಿಸಿದ ಪ್ರತಿಪಕ್ಷದ ಸದಸ್ಯರು ತಮ್ಮ ಆಸನಗಳಿಗೆ ಹೋಗದೇ ನೇರವಾಗಿ ಸಭಾಧ್ಯಕ್ಷರ ಮುಂಭಾಗಕ್ಕೆ (ಬಾವಿ) ಹೋದರು.ಈಗಾಗಲೇ ಏಳು ಜನರನ್ನು ಕರೆದು ವಿಚಾರಣೆ ಮಾಡಲಾಗಿದೆ. ಎಫ್‌ಎಸ್‌ಎಲ್ ವರದಿಯಿಂದ ಘಟನೆ ನಡೆದಿರುವುದು ದೃಢಪಟ್ಟಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂಬ ಸರ್ಕಾರದ ಉತ್ತರ ವಿಪಕ್ಷಕ್ಕೆ ತೃಪ್ತಿ ತರಲಿಲ್ಲ. ಸ್ಪೀಕರ್ ಎದುರಿನಲ್ಲಿ ಚಪ್ಪಾಳೆ ತಟ್ಟಿ ಪ್ರದಕ್ಷಿಣೆ ಹಾಕಿ ಭಜನೆ ಮಾಡಿ, ಕಲಾಪಕ್ಕೆ ಅಡ್ಡಿ ಉಂಟು ಮಾಡಲು ಯತ್ನಿಸಿದರು. ಆದರೆ ವಿಪಕ್ಷದ ಧರಣಿ ಮತ್ತು ಘೋಷಣೆಗಳ ನಡುವೆಯೇ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಲು ಸಿಎಂ ಮುಂದಾದರು. ಪ್ರತಿಪಕ್ಷದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಸದನದ ಒಳಗಿನ ಪ್ರತಿಭಟನೆಯಿಂದ ಪ್ರಯೋಜನ ಆಗದು ಎಂದು ಖಚಿತವಾಗುತ್ತಿದ್ದಂತೇ `ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ’ ಎಂದು ಹೇಳಿ ಆರ್.ಅಶೋಕ ನೇತೃತ್ವದಲ್ಲಿ ವಿಪಕ್ಷ ಸಭಾತ್ಯಾಗ ಮಾಡಿತು. ನಂತರ ಸಿಎಂ ಉತ್ತರ ನೀಡಿ ಬಜೆಟ್‌ಗೆ ಅಂಗೀಕಾರವನ್ನು ಪಡೆದರು.
ಇತ್ತ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ದೇಶದ್ರೋಹಿ ಹೇಳಿಕೆ ನೀಡಿರುವವರನ್ನು ೩೬ ಗಂಟೆಯಾದರೂ ಬಂಧಿಸಿಲ್ಲ. ಏಳು ಜನರನ್ನು ಕರೆತಂದು ವಿಚಾರಣೆ ಮಾಡಿ ವಾಪಸ್ ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಆರೋಪಿಗಳ ರಕ್ಷಣೆ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕರು ಬಾವಿಗಿಳಿದು ಧರಣಿ ನಡೆಸಿದರು. ಭೋಜನವಿರಾಮದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಗದ್ದಲ ಆರಂಭಿಸಿದರು. ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗುತ್ತ ಪ್ರತಿಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿ ಹೊರನಡೆದರು.