ಗೂಂಡಾಗಳ ಘಟಕಗಳನ್ನೂ ಅಸ್ತಿತ್ವಕ್ಕೆ ತರುವುದು ಬಾಕಿ

Advertisement

ಬೆಂಗಳೂರು: ಮಾಫಿಯಾಗಳು, ವಿದ್ರೋಹಿಗಳು ಹಾಗೂ ಗೂಂಡಾಗಳ ಘಟಕಗಳನ್ನೂ ಅಸ್ತಿತ್ವಕ್ಕೆ ತರುವುದು ಬಾಕಿ ಇದ್ದಂತೆ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ನಡೆದ ಬರ್ಬರ ಹತ್ಯೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಮಹಾಂತಪ್ಪಾ ಆಲೂರೆ ಹಾಗೂ ಯುವಮೋರ್ಚಾ ಕಾರ್ಯಕರ್ತ ಗಿರೀಶ್ ಚಕ್ರ ಅವರ ಬರ್ಬರ ಹತ್ಯೆಗಳ ಅತ್ಯಂತ ಹೇಯ ಘಟನೆ ಖಂಡನೀಯ.

ಗೂಂಡಾಗಳು, ಮಾಫಿಯಾಗಳಿಗೆ ಕರ್ನಾಟಕವನ್ನು ಸುರಕ್ಷಿತ ತಾಣವನ್ನಾಗಿಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ದುಷ್ಕೃತ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುವುದು ನಿರರ್ಥಕವಾಗುತ್ತಿದೆ. ಏಕೆಂದರೆ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಕಾನೂನು ಸುವ್ಯವಸ್ಥೆಯನ್ನು ಆಕ್ರಮಿಸಿಕೊಂಡಿದೆ. ಕಾಂಗ್ರೆಸ್ ತನ್ನ ಬಳಿ ಹೊಂದಿರುವ ಅಂಗಸಂಸ್ಥೆಗಳ ಜೊತೆಗೇ ಮಾಫಿಯಾಗಳು, ವಿದ್ರೋಹಿಗಳು ಹಾಗೂ ಗೂಂಡಾಗಳ ಘಟಕಗಳನ್ನೂ ಅಸ್ತಿತ್ವಕ್ಕೆ ತರುವುದು ಬಾಕಿ ಇದ್ದಂತೆ ಕಂಡುಬರುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ಹತ್ಯೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಕಲಬುರಗಿಯ ಘಟನೆಗೆ ಸಂಬಂಧಿಸಿದಂತೆ ಕ್ರೌರ್ಯವೆಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ.