ಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ

Advertisement

ಇದು ಕ್ಷಾಮದ ಕಾಲವಲ್ಲ ನಿಜ; ಆದರೆ, ಕ್ಷಾಮದ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿರುವ ಸಂದರ್ಭದಲ್ಲಿ ಮುಖ್ಯವಾಗಿ ಜನ ಹಾಗೂ ಜಾನುವಾರುಗಳಿಗೆ ತಟ್ಟಿರುವ ಸಮಸ್ಯೆ ಎಂದರೆ ನೀರಿನ ಬರ. ಕರ್ನಾಟಕದಲ್ಲಂತೂ ನೀರಿಗೆ ಭುಗಿಲೆದ್ದಿರುವ ಹಾಹಾಕಾರ ಅಷ್ಟಿಷ್ಟಲ್ಲ. ಪ್ರಾಕೃತಿಕ ವಿಕೋಪದಿಂದ ತಲೆದೋರಿರುವ ಈ ಬೆಳವಣಿಗೆಗೆ ಯಾರದೇ ನೇರ ಪಾತ್ರ ಇಲ್ಲದೇ ಇದ್ದರೂ ಸಮಸ್ತರ ಪಾತ್ರವೂ ಒಂದಲ್ಲ ಒಂದು ರೀತಿಯಲ್ಲಿ ಇರುವುದನ್ನು ಮನವರಿಕೆ ಮಾಡಿಕೊಳ್ಳಲು ಮನಸ್ಸಿನ ಕಣ್ಣನ್ನು ತೆರೆದುನೋಡಬೇಕಷ್ಟೆ. ನಾಗರಿಕತೆಯ ಸಾಮುದಾಯಿಕ ವ್ಯವಸ್ಥೆಯಲ್ಲಿ ಸಮಸ್ತವನ್ನೂ ಹಣದಿಂದಲೇ ತೂಗಿನೋಡುವ ದೃಷ್ಟಿಕೋನ ಇರುವಾಗ ನೀರಿಗೆ ಒದಗಿರುವ ಬೆಲೆ ನಿಜಕ್ಕೂ ಅಪಾರ. ಸರ್ಕಾರಗಳಾಗಲೀ ಸ್ಥಳೀಯ ಸಂಸ್ಥೆಗಳಾಗಲೀ ಇಂತಹ ಘನಘೋರ ಬಿಕ್ಕಟ್ಟಿನ ನಿವಾರಣೆಗೆ ಪರಿಹಾರಗಳನ್ನು ರೂಪಿಸಬಹುದು ಅಷ್ಟೆ. ಆದರೆ, ಎಷ್ಟೇ ಪರಿಹಾರ ರೂಪಿಸಿದರೂ ಅದೊಂದು ರೀತಿಯಲ್ಲಿ ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ. ಇದಕ್ಕೆಲ್ಲಾ ಇರುವ ಸುಲಭ ಉಪಾಯವೆಂದರೆ ಸಾರ್ವಜನಿಕರು ಹಿತಮಿತವಾಗಿ ನೀರನ್ನು ಬಳಸುವ ಮಾರ್ಗವನ್ನು ಕಡ್ಡಾಯವಾಗಿ ಅನುಸರಿಸುವುದು. ಬೀದಿ ಬೀದಿಗಳಲ್ಲಿ ಕಾರು ತೊಳೆದು ನೀರನ್ನು ವ್ಯರ್ಥ ಮಾಡುತ್ತಿರುವ ಜನರಿಗೆ ಬುದ್ಧಿ ಹೇಳುವುದು ಕಷ್ಟ. ಆದರೆ, ಚುನಾಯಿತ ಸರ್ಕಾರಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಉಡಾಫೆ ಜನರಿಗೆ ಬುದ್ಧಿ ಕಲಿಸಬೇಕು ಅಷ್ಟೆ.
ಸರ್ಕಾರಗಳು ಸರ್ವೇ ಸಾಮಾನ್ಯವಾಗಿ ಎಂತಹ ಘೋರ ವಿಪತ್ತಿದ್ದರೂ ಅದನ್ನು ಲಘುವಾಗಿ ಪರಿಗಣಿಸಿ ಜನರನ್ನು ವಿಚಲಿತವಾಗದಂತೆ ನೋಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದ್ದೇ ಇದೆ. ನರರಾಕ್ಷಸನಂತೆ ಇಡೀ ಜಗತ್ತನ್ನೇ ಕಾಡಿದ ಕೊರೊನಾ ವ್ಯಾಧಿಯ ಕಾಲದಲ್ಲೂ ಕೂಡಾ ಸರ್ಕಾರಗಳು ಇದೇ ರೀತಿಯ ವಿಶ್ವಾಸದ ಮಾತುಗಳನ್ನು ಆಡಿ ಜನರಿಗೆ ಬದುಕುವ ಆಸೆ ಕಮರದಂತೆ ನೋಡಿಕೊಂಡಿದ್ದನ್ನು ನಾವು ಮರೆಯುವಂತಿಲ್ಲ. ಸುಪ್ರಸಿದ್ಧ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ತಮ್ಮ ಶಿಲಾಲತೆ' ಕವನ ಸಂಕಲದಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ಸಕಲ ಜೀವರಾಶಿಗಳು ಹಾಗೂ ಇಡೀ ಲೋಕವೇ ಬರ್ಬರತೆಯ ಕೂಪಕ್ಕೆ ತಿರುಗಿದ ಸಂದರ್ಭದಲ್ಲಿಬರಿಗೊಡಗಳಿಗೆ ಸಮಾಧಾನ ಹೇಳುತಿದೆ ನೀರಿಲ್ಲದ ನಲ್ಲಿ’ ಎಂಬ ಸಾಲಿನ ಮೂಲಕ ಪರಿಸ್ಥಿತಿಯ ವಿಡಂಬನೆಯ ಜೊತೆಗೆ ಅದರ ಕ್ರೌರ್ಯವನ್ನೂ ಬಿಂಬಿಸಿದ್ದು ಯಾವತ್ತಿಗೂ ಅನ್ವಯವಾಗುವ ಸಂಗತಿ. ಬತ್ತಿಹೋಗಿರುವ ನಲ್ಲಿ ಖಾಲಿ ಕೊಡಗಳಿಗೆ ಸಮಾಧಾನ ಹೇಳುತ್ತಿರುವ ರೂಪಕದಂತೆ ಸರ್ಕಾರಗಳು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಯೋಜನೆ ರೂಪಿಸಿ ಹಣವನ್ನು ಗೊತ್ತುಪಡಿಸಿರುವ ವಿಧಾನದಲ್ಲಿ ಜನರ ವಿಶ್ವಾಸ ಕಮರದಂತೆ ನೋಡಿಕೊಳ್ಳುವ ಹೃದಯವಂತಿಕೆ ಇದೆ. ಆದರೆ, ವಾಸ್ತವವಾಗಿ ನೀರನ್ನು ಪೂರೈಕೆ ಮಾಡುವುದು ಅಂದುಕೊಂಡಷ್ಟು ಸುಲಭ ಅಲ್ಲ ಎಂಬ ಪರೋಕ್ಷ ಸಂದೇಶವೂ ಅದರಲ್ಲಿ ಅಡಗಿದೆ.
ನಿಜ. ಬೆಂಗಳೂರು ಮತ್ತು ರಾಜ್ಯದ ಪಟ್ಟಣ ಪ್ರದೇಶಗಳಲ್ಲಿ ಖಾಲಿ ಕೊಡಗಳ ಮೆರವಣಿಗೆ ಬರಿಗಣ್ಣಿಗೆ ಕಾಣುತ್ತಿದೆ. ಏಕೆಂದರೆ, ಇವೆಲ್ಲವೂ ಜನ ಮತ್ತು ಮಾಧ್ಯಮಗಳು ಓಡಾಡುವ ಪ್ರದೇಶ. ಆದರೆ, ಅಷ್ಟಾಗಿ ಜನರಾಗಲೀ, ಮಾಧ್ಯಮಗಳಾಗಲೀ ಗಮನಿಸದೇ ಇರುವ ಹಳ್ಳಿಗಾಡಿನ ಪರಿಸ್ಥಿತಿ ಇದಕ್ಕಿಂತಲೂ ಘನಘೋರ. ಬಾವಿಗಳು ಬತ್ತಿಹೋಗಿವೆ. ಕೊಳವೆ ಬಾವಿಗಳು ನಿಸ್ತೇಜವಾಗಿವೆ. ನೀರು ಪೂರೈಸುವ ಯೋಜನೆಗಳಿಗೆ ನೀರೇ ಇಲ್ಲದಂತಾಗಿದೆ. ಹಾಗೊಮ್ಮೆ ನೀರು ಲಭ್ಯವಿರುವ ಪ್ರದೇಶಗಳಲ್ಲಿ ನೀರನ್ನು ಸರಬರಾಜು ಮಾಡಲು ವಿದ್ಯುತ್ ಪೂರೈಕೆ ಕೈಕೊಟ್ಟಿದೆ. ಇಂತಹ ದುರ್ಬರ ಸನ್ನಿವೇಶದಲ್ಲಿ ಹಳ್ಳಿಗಾಡಿನ ಜನ ಬದುಕುತ್ತಿರುವಾಗ ಆದ್ಯತೆಯ ಮೇಲೆ ಯೋಜನೆಗಳನ್ನು ರೂಪಿಸಿ ಹಳ್ಳಿಗರನ್ನು ರಕ್ಷಿಸಬೇಕಾದ ಹೊಣೆ ಸರ್ಕಾರದಷ್ಟೇ ಅಲ್ಲ ಇಡೀ ಸಮಾಜದ್ದು ಕೂಡಾ.
ಸುಗ್ಗಿಯ ಕಾಲದಲ್ಲಿ ರೈತಾಪಿ ಜನರು ಸಹಕಾರಿ ಸಂಘಗಳು ಹಾಗೂ ಬ್ಯಾಂಕುಗಳಿಂದ ಪಡೆದ ಸಾಲದ ಮರುಪಾವತಿಗೆ ಮನೆಗಳನ್ನೇ ಹರಾಜಿಗೆ ಇಡಬೇಕಾದ ಪರಿಸ್ಥಿತಿಯೂ ಇಲ್ಲದಿಲ್ಲ. ಕೊಟ್ಟ ಹಣವನ್ನು ವಾಪಸ್ಸು ಪಡೆಯಬಾರದು ಎಂದು ಬ್ಯಾಂಕುಗಳಿಗೆ ಯಾರೂ ಹೇಳುವಂತಿಲ್ಲ. ಅದು ಅವರ ಜವಾಬ್ದಾರಿ. ಆದರೆ, ಈಗ ತುತ್ತು ಅನ್ನಕ್ಕೆ ತತ್ವಾರ ಎದುರಿಸುತ್ತಿರುವಾಗ ಸಾಲ ವಸೂಲಾತಿಗೆ ಪೀಡಿಸದೆ ಕೊಂಚ ಹೃದಯವಂತಿಕೆಯನ್ನು ಸರ್ಕಾರ ತೋರಬೇಕಾದ ಅನಿವಾರ್ಯ ಪರಿಸ್ಥಿತಿಗೆ ಮದ್ದನ್ನು ರೂಪಿಸುವುದು ಅಗತ್ಯ. ಇದು ಸಾಲದು ಎಂಬಂತೆ ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಭಾರತದ ಭವಿಷ್ಯವನ್ನು ರೂಪಿಸುವ ಲೋಕಸಭಾ ಚುನಾವಣೆಯೂ ಇದೇ ಬೇಸಿಗೆಯಲ್ಲೇ ನಡೆಯಲಿರುವುದು ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿದೆ. ಏನಾದರೂ ಸರ್ಕಾರದ ಜೊತೆಗೆ ಸಾರ್ವಜನಿಕರೂ ಕೈಜೋಡಿಸಿ ಭೀಕರ ಕ್ಷಾಮದ ದವಡೆಗೆ ಅಮಾಯಕ ಜನ ಸಿಗದಂತೆ ನೋಡಿಕೊಳ್ಳಲು ಈಗಲೇ ಕಾರ್ಯೋನ್ಮುಖವಾಗುವುದು ಜನಾದೇಶದ ನಿಜವಾದ ಧರ್ಮ.